-->
ಕೃಷ್ಣನ ನೆಲೆ ಬದುಕಿಗೆ ದೀಪಸ್ತಂಭವಾಗಲಿ: ಪೇಜಾವರ ವಿಶ್ವಪ್ರಸನ್ನ ಶ್ರೀ

ಕೃಷ್ಣನ ನೆಲೆ ಬದುಕಿಗೆ ದೀಪಸ್ತಂಭವಾಗಲಿ: ಪೇಜಾವರ ವಿಶ್ವಪ್ರಸನ್ನ ಶ್ರೀ


ದೈತ ಮತ ಸಂಸ್ಥಾಪಕ ಆಚಾರ್ಯ ಮಧ್ವರ ಭಕ್ತಿಗೆ ಒಲಿದುಬಂದ ಕೃಷ್ಣನಿಂದಾಗಿ ಉಡುಪಿಗೆ ಹೆಸರು ಬಂದಿದ್ದು, ದ್ವಾರಕೆಯಿಂದ ಹಡಗಿನ ಮೂಲಕ ಉಡುಪಿಗೆ ಬರುವ ಮುನ್ನ ನೆಲೆಯಾದ ಮಲ್ಪೆ ಕೂಡಾ ಪವಿತ್ರವಾಗಬೇಕು. ನಮ್ಮೆಲ್ಲರ ಬದುಕಿಗೆ ದೀಪಸ್ತಂಭವಾಗಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶಿಸಿದರು.


ಮಲ್ಪೆ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಮಲ್ಪೆ ಸಮುದ್ರತೀರದ ಆನಂದ ಶರಧಿ ನಿವೇಶನದಲ್ಲಿ ಮೇ 31ರ ವರೆಗೆ ನಡೆಯಲಿರುವ ಕೃಷಿ ಮೇಳ, ಅಂತರ ಜಿಲ್ಲಾ ಭಜನಾ ಸ್ಪರ್ಧೆ, ಗ್ರಾಮೀಣ ಕ್ರೀಡಾ ಸ್ಪರ್ಧೆ, ಮಾತೃವಂದನ ಕಾರ್ಯಕ್ರಮ ಇತ್ಯಾದಿಗಳನ್ನೊಳಗೊಂಡ ಶ್ರೀ ಆನಂದ ಶರಧಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.


ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶ್ರೀಕೃಷ್ಣನಿಂದಾಗಿ ಉಡುಪಿ ಪ್ರಸಿದ್ದ. ಅವನು ಮೊದಲು ಹೆಜ್ಜೆ ಇಟ್ಟ ತಾಣ ಮಲ್ಪೆ. ಈ ನೆಲದಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ಪೂರಕವಾದ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಆಶಯ ಹೊಂದಲಾಗಿದೆ ಎಂದರು.

ಕೃಷಿ ಪ್ರಧಾನವಾದ ನಾಡು ನಮ್ಮದು. ಹಸಿದು ಹಲಸು, ಉಂಡು ಮಾವು ಎಂಬ ಮಾತಿನಂತೆ ಬಡತನದ ಕಾಲದಲ್ಲಿ ಹಲಸಿನ ಹಣ್ಣು ತಿಂದು ಬದುಕು ಸಾಗಿಸಿದವರೂ ನಮ್ಮಲ್ಲಿದ್ದರು. ಇಂದು ಆಹಾರ ಪದ್ಧತಿ ಬದಲಾಗಿದೆ. ಅಹಾರಕ್ಕಿಂತ ಔಷಧ ಸೇವನೆ ಅತಿಯಾಗಿದೆ. ನಮ್ಮ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾವು ಮತ್ತು ಹಲಸು ಪ್ರಾಮುಖ್ಯತೆ ಪಡೆದಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಹಲಸು, ಮಾವು ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದರು.



ಅಧ್ಯಕ್ಷತೆ ವಹಿಸಿದ್ದ ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಆಚಾರ್ಯ ಮಧ್ವರಿಗೆ ಕೃಷ್ಣ ಲಭಿಸಿದ ಈ ತಾಣವನ್ನು ಪ್ರತೀ ವ್ಯಕ್ತಿಯಲ್ಲಿ ಕೃಷ್ಣ ಪ್ರಜ್ಞೆ ಮೂಡಿಸುವ, ಜ್ಞಾನ ಕೇಂದ್ರವಾಗಿಸಲು ಯೋಜಿಸಲಾಗಿದೆ. ಈ ಕಾರ್ಯ ಭಜನೆಯ ಮೂಲಕ ನಡೆಯಬೇಕು ಎಂದರು 

ಮಲ್ಪೆಯನ್ನು ಭಕ್ತಿ- ಶ್ರದ್ದೆಯ ಕೇಂದ್ರವಾಗಿಸಬೇಕು. ಈ ನಿಟ್ಟಿನಲ್ಲಿ ಅಲ್ಲಿ ಆಚಾರ್ಯ ಮಧ್ವರ ಮೂರ್ತಿ ಸ್ಥಾಪಿಸಬೇಕು ಎಂಬ ಆಶಯ ಹೊಂದಲಾಗಿದೆ ಎಂದು ಅದಮಾರು ಶ್ರೀಪಾದರು ಹೇಳಿದರು.

ಅಭ್ಯಾಗತರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿಕ ಸತ್ಯನಾರಾಯಣ ಬೆಳೇರಿ ಮಾತನಾಡಿ, ಇಂದಿನ ಶಿಕ್ಷಣ ಕ್ರಮ ಹಣ ಗಳಿಕೆಗೆ ಆದ್ಯತೆ ನೀಡುತ್ತಿದೆಯೇ ವಿನಾ ಅನ್ನ ಉತ್ಪಾದನೆಗಿಲ್ಲ. ಕೃಷಿ ಕ್ಷೇತ್ರಕ್ಕೆ ಯುವಜನತೆ ಆಸಕ್ತಿ ತೋರುತ್ತಿಲ್ಲ. ವಾಣಿಜ್ಯ ಬೆಳೆಗಳಿಗೆ ಕೃಷಿ ರಂಗ ಆಸಕ್ತಿ ತೋರುತ್ತಿದೆ ಎಂದು ವಿಷಾದಿಸಿದರು.

ಉದ್ಯಮಿ ಸಾಧು ಸಾಲ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ ಡಿ. ಸುವರ್ಣ, ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್, ಉಡುಪಿ ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ಉಡುಪಿ ಶ್ರೀಕೃಷ್ಣ ಮಠ ಪರಿಸರ ಪ್ರತಿಷ್ಠಾನ ಕಾರ್ಯದರ್ಶಿ ರತ್ನಕುಮಾ‌ರ್ ಮಾತನಾಡಿದರು. ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಮಲ್ಪೆ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಆಚಾರ್ಯ ಮಧ್ವರಿಗೆ ಕೃಷ್ಣ ಲಭಿಸಿದ ಮಲ್ಪೆಯ ಈ ಪರಿಸರ ಆಧ್ಯಾತ್ಮಿಕ ತಾಣವೂ ಆಗಬೇಕು. ಈ ನಿಟ್ಟಿನಲ್ಲಿ ಭಜನಾ ಸ್ಪರ್ಧೆ ಸಹಿತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಡ್ರಗ್ಸ್‌, ಲವ್ ಜಿಹಾದ್ ಇತ್ಯಾದಿಗಳ ತಡೆಗೆ ಮನೆ ಮನೆಗಳಲ್ಲಿ ಧರ್ಮ ಶಿಕ್ಷಣ, ಧಾರ್ಮಿಕ ಪ್ರಜ್ಞೆ ಮೂಡಿಸಬೇಕು. ಗ್ರಾಮ ಗ್ರಾಮಗಳ ದೇವಾಲಯ, ಶ್ರದ್ದಾಕೇಂದ್ರಗಳಲ್ಲಿ ಭಜನೆ ನಡೆಯಬೇಕು ಎಂಬುದು ಭಜನಾ ಸ್ಪರ್ಧೆಯ ಆಶಯ ಎಂದರು.

ಶರತ್‌ ಕುಮಾ‌ರ್ ಉಪಾಧ್ಯ ವೇದಘೋಷಗೈದರು. ವಿದ್ಯಾರ್ಥಿನಿ ಸಿಂಧು ಹೆಗಡೆ ಪ್ರಾರ್ಥಿಸಿದರು. ವಿದ್ವಾನ್ ಷಣ್ಮುಖ ಹೆಬ್ಬಾ‌ರ್ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಗೋವಿಂದರಾಜ್ ವಂದಿಸಿದರು.

ಈ ಸಂದರ್ಭದಲ್ಲಿ ಹಲಸು- ಮಾವು ಮೇಳ, ಕರಕುಶಲ- ಕೈಮಗ್ಗ ಮೇಳ ನಡೆಯಿತು.


f

Ads on article

Advertise in articles 1

advertising articles 2

Advertise under the article