-->
ತುಳುನಾಡಿನ ವಿಶಿಷ್ಟ ಆಚರಣೆ "ಕಾಪು ಪಿಲಿಕೋಲ" ಸಂಪನ್ನ

ತುಳುನಾಡಿನ ವಿಶಿಷ್ಟ ಆಚರಣೆ "ಕಾಪು ಪಿಲಿಕೋಲ" ಸಂಪನ್ನ


ಕಾಪುವಿನ ಐತಿಹಾಸಿಕ ಶ್ರೀ ಬ್ರಹ್ಮ ಮುಗೇರ್ಕಳ ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಸಾಂಪ್ರದಾಯಿಕ ಹಾಗೂ ಪ್ರಸಿದ್ಧ ಪಿಲಿಕೋಲವು ಸಂಪನ್ನಗೊಂಡಿದೆ. ತುಳುನಾಡಿನ ದೈವಾರಾಧನೆಯ ವಿಶಿಷ್ಟ ಆಚರಣೆಗಳಲ್ಲಿ ಒಂದಾದ ಈ ಕೋಲವು ಸಂಪ್ರದಾಯಬದ್ಧವಾಗಿ ಜರುಗಿತು.



ಕಾಪುವಿನ ಪಡು ಗ್ರಾಮದ ಶ್ರೀಬ್ರಹ್ಮ ಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ನಡೆದ ಈ ಆಚರಣೆ ತುಳುನಾಡಿನ ಪ್ರಾಚೀನ ದೈವಾರಾಧನಾ ಪರಂಪರೆಯ ಪ್ರತೀಕ.  ಪಿಲಿಕೋಲಕ್ಕೂ ಮುನ್ನ ತೆಂಗಿನ ಗರಿಗಳಿಂದ ತಯಾರಿಸಲಾದ 'ಒಳಿಗುಂಡ' ಎಂಬ ತಾತ್ಕಾಲಿಕ ಮಂಟಪದೊಳಗೆ ಹುಲಿವೇಷದ ಬಣ್ಣಗಾರಿಕೆ ನಡೆಯುತ್ತದೆ. ಈ ಸಂದರ್ಭದಲ್ಲಿ ದೈವೀಶಕ್ತಿಯ ಆವಾಹನೆಯಾಗುತ್ತದೆ ಎಂಬ ನಂಬಿಕೆಯಿದೆ. 


ಬಬ್ಬರ್ಯ, ಕೊಡಮಣಿತ್ತಾಯ, ನಂದಿಕೇಶ್ವರ ಸೇರಿದಂತೆ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ಬಳಿಕ ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡ ಪಿಲಿಕೋಲವು ಸಂಜೆ 6 ಗಂಟೆಯವರೆಗೂ ನಡೆಯಿತು. ಪಿಲಿ ಭೂತವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದ ಬಳಿಕ, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಟ್ಟ ಬಂಟ ಕಂಬವನ್ನೇರಿ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಬೇಟೆಗಾಗಿ ಹೊರಟಿತು. ಐದು ಗಂಟೆಗಳ ಕಾಲ ಕಾಪು ಮಾರಿಗುಡಿ ಪರಿಸರದಲ್ಲಿ ಸುತ್ತಾಡಿ ಬೇಟೆ ಯಾಡುವ ಸಂಪ್ರದಾಯ ನಡೆಯಿತು..


ಹುಲಿ ಭೂತ  ಮುಟ್ಟಬಾರದೆಂಬ ಪ್ರತೀತಿ ಇರೋದರಿಂದ ಅಟ್ಟಿಸಿಕೊಂಡು ಬರುವ ದೈವದಿಂದ ತಪ್ಪಿಸಿಕೊಂಡು ಜನ ಓಡುವುದೇ ಈ ಪಿಲಿ ಭೂತದ ಆಕರ್ಷಣೆ.  ಹುಲಿ ವೇಷಧಾರಿ ಆವೇಶಭರಿತವಾಗಿ ಭಕ್ತರತ್ತ ಧಾವಿಸುತ್ತಿದ್ದಂತೆ ಜನರು ಭಯಭಕ್ತಿಯಿಂದ ಓಡಿಹೋಗಿ ಮತ್ತೆ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು. ಹುಲಿ ಮುಟ್ಟಿದರೆ ಕಂಟಕ ಎದುರಾಗಲಿದೆ ಎಂಬ ನಂಬಿಕೆಯಿದೆ. ಹಾಗಾಗಿ ಹುಲಿ ಮುಟ್ಟಿದರೆ ದೈವಸ್ಥಾನಕ್ಕೆ ತೆರಳಿ ಪೂರ್ವ ಸಂಪ್ರದಾಯದ ವಿಶೇಷ ಪದ್ಧತಿ ಮತ್ತು ಪ್ರಾಯಶ್ಚಿತ್ತ ವಿಧಿಗಳನ್ನು ನೆರವೇರಿಸಬೇಕು.  ಸುದೀರ್ಘ ಸಂಚಾರದ ಬಳಿಕ ಪಿಲಿದೈವ ಮಾರಿಯಮ್ಮ ದೇವಿಯ ಸನ್ನಿಧಿಗೆ ಮರಳಿದಾಗ ಪಿಲಿಕೋಲಕ್ಕೆ ತೆರೆ ಬಿದ್ದಿತು.

ಪಿಲಿಕೋಲ ಪುರಾಣ ಹಿನ್ನೆಲೆ

ಕಾಪು ಸೀಮೆಯನ್ನು ಆಳುತ್ತಿದ್ದ ಭೈರರಸು ತನ್ನ ಅರಮನೆಯ ಪಂಜರದಲ್ಲಿ ಹುಲಿಯನ್ನು ಸಾಕುತ್ತಿದ್ದರು. ಕಾಲಕ್ರಮೇಣ ಹುಲಿಯನ್ನು ಸಾಕಲು ಕಷ್ವವಾದ ಸಂಧರ್ಭದಲ್ಲಿ ತನ್ನ ಸೀಮೆ ಪೊರೆಯುವ ಮಾರಿಯಮ್ಮನ ಅನುಮತಿ ಕೇಳಿ ಹುಲಿಯನ್ನು ಕಾಡಿಗೆ ಬಿಡುವ ಆಲೋಚನೆ ಮಾಡಿದ. ಆ ದಿನ ರಾತ್ರಿ ರಾಜನ ಕನಸಲ್ಲಿ ಬಂದ ಮಾರಿಯಮ್ಮ ಆ ಹುಲಿ ದೈವಾಂಶ ಸಂಭೂತವಾಗಿದ್ದು, ತನ್ನ ದೇವಸ್ಥಾನದ ಬಲಭಾಗದಲ್ಲಿರುವ ಸ್ಥಳದಲ್ಲಿ ಹುಲಿಗಳಿಗೊಂದು ಆಲಯ ಕಟ್ಟಿಸಿ ಅವುಗಳನ್ನೂ ಆರಾಧಿಸಲು ಕರೆ ಕೊಡುತ್ತಾಳೆ. ಇದರಂತೇ ಪಿಲಿಭೂತವಾಗಿ ನಂಬಲಾಗಿದೆ ಎಂಬ ಪುರಾಣ ಹಿನ್ನೆಲೆಯಿದೆ.








Ads on article

Advertise in articles 1

advertising articles 2

Advertise under the article