ಭಕ್ತಿ ಇಲ್ಲದೇ ಮಾಡಿದ ಶಾಸ್ತ್ರ, ಪ್ರವಚನಗಳು ನಿರರ್ಥಕ- ಸೋದೆ ವಿಶ್ವವಲ್ಲಭ ಶ್ರೀ(video)
ಮಲ್ಪೆ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಮಲ್ಪೆ ಸಮುದ್ರತೀರದ ಆನಂದ ಶರಧಿ ನಿವೇಶನದಲ್ಲಿ ಮೇ 31ರ ವರೆಗೆ ನಡೆಯಲಿರುವ ಅಂತರ ಜಿಲ್ಲಾ ಭಜನಾ ಸ್ಪರ್ಧೆ ಕಾರ್ಯಕ್ರಮವನ್ನು ಸೋದೆ ಮಠಾಧೀಶ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ ಮಠಾಧೀಶ ಈಶಪ್ರಿಯತೀರ್ಥ ಶ್ರೀಪಾದರು ಸೋಮವಾರ ಉದ್ಘಾಟಿಸಿದರು.
ಬಳಿಕ ಆಶೀರ್ವಚನ ನೀಡಿದ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಯಾರಲ್ಲಿ ಶುದ್ಧ ಭಕ್ತಿ ಇದೆಯೋ ಅವರಿಗೆ ದೇವರು ಒಲಿಯುತ್ತಾನೆ. ಭಕ್ತಿ ಇಲ್ಲದೇ ಎಷ್ಟೇ ಶಾಸ್ತ್ರ ಪ್ರವಚನ ಮಾಡಿದರೂ ಅದು ನಿರರ್ಥಕ. ಮಧ್ವಾಚಾರ್ಯರು ಭಕ್ತಿ ಸಿದ್ಧಾಂತದ ಪ್ರತಿಪಾದಕರು. ದೇವರು ಭಕ್ತಿಗೆ ಒಳಿಯುತ್ತನೆ ಎನ್ನುವವುದನ್ನು ಮಧ್ವಾಚಾರ್ಯರು ತಿಳಿಸಿಕೊಟ್ಟವರು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅದಮಾರು ಕಿರಿಯ ಮಠಾಧೀಶ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸುವ ನಿಟ್ಟಿನಲ್ಲಿ ಮಲ್ಪೆಯನ್ನು ಅಧ್ಯಾತ್ಮ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು. ಮಲ್ಪೆ ಜ್ಞಾನ ನೀಡುವ ಕೇಂದ್ರ ಆಗಬೇಕು ಅದಕ್ಕಾಗಿ ಮಲ್ಪೆಯಲ್ಲಿ ಆಚಾರ್ಯ ಮದ್ವರ ಜ್ಞಾನ ಕೇಂದ್ರ ಆಗಬೇಕು ಇದಕ್ಕೆ ನಾವೆಲ್ಲರೂ ಪ್ರಯತ್ನಿಸೋಣ ಎಂದರು.
ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಸನಾತನ ಸಂಸ್ಕೃತಿಗೆ ಇನ್ನಷ್ಟು ಒತ್ತು ನೀಡುವ ನಿಟ್ಟಿನಲ್ಲಿ ಭಜನಾ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. ಮಲ್ಪೆ ಕಡಲ ತೀರದಲ್ಲಿ ಇನ್ನಷ್ಟು ಧಾರ್ಮಿಕ ಕಾರ್ಯಕ್ರಮಗಳು ಮೂಡಿ ಬರಲಿ. ಅಲ್ಲದೇ ಮಲ್ಪೆ ಕಡಲ ತೀರದಲ್ಲಿ ರಾಮನವಮಿ ಅಥವಾ ಹನುಮ ಜಯಂತಿ ಕಾರ್ಯಕ್ರಮಗಳಲ್ಲಿ ಹಮ್ಮಿಕೊಳ್ಳುವಂತೆ ಉಭಯ ಸ್ವಾಮೀಜಿಗಳಲ್ಲಿ ಮನವಿ ಮಾಡಿದರು.
ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಭಜನೆಗಳಲ್ಲೂ ಈಗ ಹೊಸತನವನ್ನು ಬಯಸುತ್ತಿದ್ದಾರೆ. ಮೊದಲೆಲ್ಲಾ ದೇವರನ್ನು ಒಲಿಸಿಕೊಂಡು ಭಜನೆ ಹಾಡುತ್ತಿದ್ದರು. ಈಗ ಸಾಹಿತಿಗಳು ಭಜನೆ ಬರೆಯುವ ಕಾಲ ಬಂದಿದೆ. ಹೊಸತು ಎನ್ನುವ ಗಿಳಿನಿಂದ ಸನಾತನ ಧರ್ಮ ಕೊರಗುತ್ತಿದೆ. ಹಾಗಾಗಿ ದಾಸ ಸಾಹಿತ್ಯವನ್ನು ಜೀವಂತವಾಗಿಡುವಲ್ಲಿ ಇಂತಹ ಭಜನಾ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಮಧ್ವಾಚಾರ್ಯರಿಗೆ ಶ್ರೀಕೃಷ್ಣ ಸಿಕ್ಕಿದ ಮಲ್ಪೆ ಕಡಲ ತೀರದಲ್ಲಿ ಮಧ್ವಾಚಾರ್ಯರ ಕುರುಹುಗಾಗಿ ಮಧ್ವಾಚಾರ್ಯ ಥೀಮ್ ಪಾರ್ಕ್ ನ ಅವಶ್ಯಕತೆ ಇದೆ. ಮಧ್ವಾಚಾರ್ಯರ ಥೀಂ ಪಾರ್ಕ್ ನಿರ್ಮಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನವಾಗಬೇಕು. ಸ್ವಾಮೀಜಿಗಳ ಮೂಲಕ ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸುವ ಪ್ರಯತ್ನವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೆಸರಾಂತ ಭಜನಾ ಸಾಧಕ ಜಯ ಪ್ರಕಾಶ್ ಆರ್ ಕಿದಿಯೂರು ಅವರನ್ನು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಶೆಟ್ಟಿ , ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್ ಚಂದ್ರಶೇಖರ್, ರಮೇಶ್ ಕಾಂಚನ್, ಮೊಗವೀರ ಮುಖಂಡ ಸಾಧು ಸಾಲ್ಯನ್, ಕೊರಗ ಸಮಾಜ ಪ್ರಮುಖ ಗಣೇಶ ಬಾರ್ಕೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮಂಗಳೂರು ವಿಭಾಗದ ಕಾರ್ಯವಾಹ ಡಾ. ವಾದಿರಾಜ್, ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಮಧೂರು ಪಿ.ಬಾಲಸುಬ್ರಹ್ಮಣ್ಯ, ದಿನೇಶ್ ಪುತ್ರನ್ ಉಪಸ್ಥಿತರಿದ್ದರು.
ವೇದಘೋಷ್ ವಿದ್ವನ್ ಗುರುಪ್ರಸಾದ್ ರಾವ್ ಅವರ ತಂಡದಿಂದ ವೇದಘೋಷ ನೆರವೇರಿತು. ಪ್ರಾದೇಶ್ ಆಚಾರ್ಯ ಬೆಂಗಳೂರು ಪ್ರಾರ್ಥನೆ ನೆರವೇರಿಸಿದರು. ಸಂಘಟನಾ ಕಾರ್ಯದರ್ಶಿ ಗೋವಿಂದರಾಜ್ ಸ್ವಾಗತಿಸಿ, ವಿಜಯ ಕೊಡವೂರು ಧನ್ಯವಾದ ಸಮರ್ಪಿಸಿದರು. ವಿದ್ವಾನ್ ಷಣ್ಮುಖ ಹೆಬ್ಬಾರ್ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ವಡಭಾಂಡೇಶ್ವರ ಬಲರಾಮ ದೇವಸ್ಥಾನದಿಂದ ಆನಂದ ಶರಧಿಯ ತನಕ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಭಜನಾ ತಂಡಗಳ ಕುಣಿತ ಭಜನೆಗಳೊಂದಿಗೆ ಶೋಭಾ ಯಾತ್ರೆ ನಡೆಯಿತು.

