ಮಹಿಳೆಯ ಗರ್ಭಕೋಶದಲ್ಲಿ ಬೆಳೆದಿದ್ದ 8ಕೆಜಿ ತೂಕದ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರ ತಂಡ
ಕಳೆದ ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 44 ವರ್ಷದ ಮಹಿಳೆಯೊಬ್ಬರ ಗರ್ಭಕೋಶದಲ್ಲಿ ಬೆಳೆದಿದ್ದ ಸುಮಾರು 8 ಕೆ.ಜಿ. ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಉಡುಪಿಯ ಹಾಜಿ ಅಬ್ದುಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ತೆರವುಗೊಳಿಸಿದೆ.
ಮಹಿಳೆ ಹಲವು ತಿಂಗಳುಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರಲಿಲ್ಲ. ಹೀಗಾಗಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ಹೊಟ್ಟೆ ಊದಿಕೊಂಡಿತ್ತು.
ಬಳಿಕ ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಿದಾಗ ಗರ್ಭಕೋಶದಲ್ಲಿ ದೊಡ್ಡ ಗಾತ್ರದ ಗಡ್ಡೆ ಇರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದರು. ಮೇ.25ರಂದು ನಡೆದ ಶಸ್ತ್ರಚಿಕಿತ್ಸೆಯಲ್ಲಿ ಸ್ತ್ರೀರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ. ಕವಿತಾ ಹಾಗೂ ಡಾ. ಅಮೃತಾಂಶ್ ಅವರ ತಂಡ, ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ ಮತ್ತು ಡಾ. ರಾಜ್ ಗೋಪಾಲ್ ಭಂಡಾರಿ ಅವರ ಸಹಯೋಗದಲ್ಲಿ ಶುಶ್ರೂಷಕಾಧಿಕಾರಿ ರಕ್ಷಿತಾ ಹಾಗೂ ಓ.ಟಿ. ಸಹಾಯಕಿ ಸಂಗೀತ ಅವರ ನೆರವಿನಿಂದ ಸುಮಾರು 8 ಕೆ.ಜಿ. ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದರು.
ಶಸ್ತ್ರಚಿಕಿತ್ಸೆಗೂ ಮುನ್ನ ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಹೆಚ್. ಅಶೋಕ್ ಅವರೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆ ಹಾಗೂ ಮಾರ್ಗದರ್ಶನದಂತೆ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪ್ರಸ್ತುತ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ. ಚಿಕಿತ್ಸೆ ಬಳಿಕ ಮಾತನಾಡಿದ ಅವರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಅತ್ಯುತ್ತಮ ಸೇವೆ ನೀಡಿದ್ದು, ತಮ್ಮ ಆರೋಗ್ಯವನ್ನು ಮರಳಿ ಪಡೆಯಲು ಸಹಕರಿಸಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಅವರು ಇಷ್ಟೊಂದು ದೊಡ್ಡ ಗಾತ್ರದ ಗರ್ಭಕೋಶದ ಗಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ತೆರವುಗೊಳಿಸಿದ ವೈದ್ಯರು ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.