ಮನೆಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕುಂಜೆ ಗ್ರಾಮದ ನೇರಳಕಟ್ಟೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 11 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ಕಾಡೂರು ನಿವಾಸಿ ವಿಜಯ ಶೆಟ್ಟಿ (32) ಎಂಬಾತನನ್ನು ಬಂಧಿಸಿ, ಆತನಿಂದ ಕಳವಾದ ಸ್ವತ್ತುಗಳಲ್ಲಿ ಸುಮಾರು ₹9 ಲಕ್ಷ ಮೌಲ್ಯದ 66.22 ಗ್ರಾಂ ಚಿನ್ನ ಹಾಗೂ 175.4 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಕಳ ನಿವಾಸಿ ಅರ್ಜುನ ಪೂಜಾರಿ (29) ಬಂಧಿಸಿ ಆತನಿಂದ ಆತನಿಂದ ಸುಮಾರು ₹2 ಲಕ್ಷ ಮೌಲ್ಯದ 18.200 ಗ್ರಾಂ ಚಿನ್ನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮೇ. 23 ರಂದು ನಿರಂಜನ್ ಭಟ್ ಅವರ ಮನೆಯಲ್ಲಿ ಬೆಳಿಗ್ಗೆ 11:47 ಗಂಟೆಯಿಂದ ರಾತ್ರಿ 09:10 ಗಂಟೆಯ ನಡುವೆ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಒಡೆದು ಒಳನುಗ್ಗಿ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ನೀಡಲಾದ ದೂರಿನ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 27/2026 ದಾಖಲಿಸಿಕೊಂಡು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(3), 331(4) ಹಾಗೂ 305ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಎ. ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ ಹಾಗೂ ಚಂದ್ರಕಲಾ ಎಂ. ಪತ್ತಾರ ನೇತೃತ್ವದ ವಿಶೇಷ ತಂಡ ತನಿಖೆ ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಅಶ್ರಫ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಗ್ರಾಮಾಂತರ, ಶಂಕರನಾರಾಯಣ, ಅಮಾಸೆಬೈಲು, ಕುಂದಾಪುರ, ಕೊಲ್ಲೂರು ಹಾಗೂ ಬೈಂದೂರು ಪೊಲೀಸ್ ಠಾಣೆಗಳ ಸಿಬ್ಬಂದಿ ಭಾಗವಹಿಸಿದ್ದರು.