ಮನೆಗಳ್ಳತನ, ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ, ದಂಡ
ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣ ಹಾಗೂ ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ ಎರಡು ಪ್ರತ್ಯೇಕ ಗಂಭೀರ ಪ್ರಕರಣಗಳಲ್ಲಿ ಆರೋಪಿಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಸುಳ್ಯದ ಅಜ್ಜಾವರ ನಿವಾಸಿ ಎ.ಎಂ. ಅಜೀಜ್ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ.
2006ರಲ್ಲಿ ರಾತ್ರಿ ವೇಳೆ ಮನೆಗೆ ನುಗ್ಗಿ ಕಳ್ಳತನ ನಡೆಸಿದ ಆರೋಪದಡಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2006ರಂತೆ ಐಪಿಸಿ ಕಲಂ 457 ಮತ್ತು 380ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವೇಳೆ 2018ರಲ್ಲಿ ಕಾನೂನುಬದ್ಧ ಪೊಲೀಸ್ ಕಾವಲಿನಿಂದ ತಪ್ಪಿಸಿಕೊಂಡು ಪರಾರಿಯಾದ ಆರೋಪದ ಮೇಲೆ ಅಪರಾಧ ಕ್ರಮಾಂಕ 103/2018ರಂತೆ ಐಪಿಸಿ ಕಲಂ 224ರ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಈ ಎರಡೂ ಪ್ರಕರಣಗಳ ತನಿಖೆಯನ್ನು ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣಗಳ ಸುದೀರ್ಘ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ದಮಯಂತಿ ಅವರು, ಆರೋಪಿಯ ವಿರುದ್ಧ ಮಂಡಿಸಲಾದ ಡಿಜಿಟಲ್ ಮತ್ತು ಸಾಂದರ್ಭಿಕ ಸಾಕ್ಷ್ಯಾಧಾರಗಳು ಸಾಬೀತಾಗಿರುವುದಾಗಿ ಪರಿಗಣಿಸಿ ಶಿಕ್ಷೆ ಪ್ರಕಟಿಸಿದ್ದಾರೆ.
ಪೊಲೀಸ್ ಕಾವಲಿನಿಂದ ತಪ್ಪಿಸಿಕೊಂಡ ಪ್ರಕರಣ (ಅ.ಕ್ರ. 103/2018): ಐಪಿಸಿ ಕಲಂ 224ರ ಅಡಿಯಲ್ಲಿ ಆರೋಪಿಗೆ ಒಂದು ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ 5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 45 ದಿನಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗಿದೆ.
ಮನೆಗಳ್ಳತನ ಪ್ರಕರಣ (ಅ.ಕ್ರ. 96/2006): ಐಪಿಸಿ ಕಲಂ 457ರ ಅಡಿಯಲ್ಲಿ ಮೂರು ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು ₹5,000 ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 45 ದಿನಗಳ ಜೈಲು ಶಿಕ್ಷೆ , ಐಪಿಸಿ ಕಲಂ 380ರ ಅಡಿಯಲ್ಲಿ ಮತ್ತೊಂದು ಮೂರು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 45 ದಿನಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗಿದೆ.
ಈ ಮೂಲಕ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.