ಕೆಮ್ಮಣ್ಣು ಸಮೀಪ ಹೊಳೆಗೆ ಹಾರಲು ಯತ್ನಿಸಿದ ಯುವಕನ ರಕ್ಷಣೆ
Saturday, June 06, 2026
ಉಡುಪಿಯ ಕೆಮ್ಮಣ್ಣು ಸಮೀಪ ಹೊಳೆಗೆ ಹಾರಲು ಯತ್ನಿಸಿದ ಯುವಕನನ್ನು ಸ್ಥಳೀಯರ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ನಡೆದಿದೆ.
ಯುವಕನೊಬ್ಬ ಕೆಮ್ಮಣ್ಣು ಹೊಳೆಗೆ ಹಾರಲು ಮುಂದಾಗಿದ್ದ ವೇಳೆ ಗಮನಿಸಿದ ಸ್ಥಳೀಯರು ತಕ್ಷಣ ಮಧ್ಯಪ್ರವೇಶಿಸಿದ್ದಾರೆ. ಸ್ಥಳೀಯ ಸಮಾಜಸೇವಕ ವಿಶು ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಳೀಯರ ಸಹಾಯದಿಂದ ಯುವಕನನ್ನು ರಕ್ಷಿಸಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವಕ ತನ್ನ ಹೆಸರು ಹಾಗೂ ಇತರ ವೈಯಕ್ತಿಕ ವಿವರಗಳನ್ನು ತಿಳಿಸಲು ನಿರಾಕರಿಸಿದ್ದು, ಆತನ ಗುರುತು ಇನ್ನೂ ಪತ್ತೆಯಾಗಿಲ್ಲ. ಯುವಕನ ದೇಹದಲ್ಲಿ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯ ಲಕ್ಷಣಗಳಿರುವುದಾಗಿ ತಿಳಿದುಬಂದಿದೆ. ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಆದಿತ್ಯ ದೇವಾಡಿಗ ಸಹಕರಿಸಿದ್ದು, ಯುವಕನ ಸಂಬಂಧಿಕರು ಅಥವಾ ಆತನ ಬಗ್ಗೆ ಮಾಹಿತಿ ಹೊಂದಿರುವವರು ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಂಪರ್ಕಿಸಿ ಅಗತ್ಯ ಮಾಹಿತಿ ನೀಡುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.