-->
ಗ್ರಾಮೀಣ ಕೃಷಿ ಬದುಕಿನ ಕುರುಹು "ಬೈ ಹುಲ್ಲು ಬಣವೆ" ಕಣ್ಮರೆ

ಗ್ರಾಮೀಣ ಕೃಷಿ ಬದುಕಿನ ಕುರುಹು "ಬೈ ಹುಲ್ಲು ಬಣವೆ" ಕಣ್ಮರೆ


ಒಂದು ಕಾಲದಲ್ಲಿ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಮನೆಮಠಗಳ ಅಂಗಳದಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದ “ಬೈ ಹುಲ್ಲು ಬಣವೆ” ಈಗ ನಿಧಾನವಾಗಿ ಇತಿಹಾಸದ ಪುಟ ಸೇರ್ತಿದೆ. ಕೃಷಿ ಜೀವನಶೈಲಿಯ ಒಂದು ಭಾಗವಾಗಿದ್ದ ಈ ಸಂಪ್ರದಾಯ, ಆಧುನಿಕ ಯುಗದ ಬದಲಾವಣೆಗಳ ನಡುವೆ ಕಾಣೆಯಾಗುತ್ತಿದೆ.


ಉಡುಪಿಯ ಹಳ್ಳಿಗಳಲ್ಲಿ ಒಂದು ಕಾಲದಲ್ಲಿ ಮಳೆಗಾಲ ಮುಗಿದರೆ ಸಾಕು, ಹೊಲದ ಅಂಚಿನಲ್ಲಿ ಎತ್ತರವಾಗಿ ನಿಂತಿರುವ “ಬೈ ಹುಲ್ಲು ಬಣವೆ”ಗಳು ಕಣ್ಣಿಗೆ ಬೀಳುತ್ತಿದವು. ಅಕ್ಕಿ ಕಟಾವಿನ ನಂತರ ಉಳಿಯುವ ಹುಲ್ಲನ್ನು ಜೋಪಾನವಾಗಿ ರಾಶಿ ಮಾಡಿ, ಮಳೆಯೂ ಗಾಳಿಯೂ ತಟ್ಟದಂತೆ ಕಟ್ಟುವ ಆ ಬಣವೆಗಳು ಕೇವಲ ಹುಲ್ಲಿನ ಗುಡ್ಡಗಳಲ್ಲ; ಅವು ರೈತನ ಬದುಕಿನ ಭಾಗವಾಗಿದ್ದವು.

ಮಳೆಯ ಕಾಲದಲ್ಲಿ ಜಾನುವಾರುಗಳಿಗೆ ಆಹಾರವಾಗಲಿ ಎಂದು ಅಕ್ಕಿ ಕೊಯ್ಲಿನ ನಂತರ ಉಳಿಯುವ ಹುಲ್ಲನ್ನು ಒಣಗಿಸಿ, ವೃತ್ತಾಕಾರ ಅಥವಾ ಶಿಖರದಾಕಾರದಲ್ಲಿ ರಚಿಸಲಾಗುತ್ತಿದ್ದ ಈ ಬಣವೆಗಳು, ರೈತರ ಜಾಣ್ಮೆ ಮತ್ತು ಪರಿಶ್ರಮದ ಸಂಕೇತವಾಗಿದ್ದವು.

ಬೈ ಹುಲ್ಲು ಬಣವೆ ಕೇವಲ ಕೃಷಿಯ ಅವಶ್ಯಕತೆ ಅಲ್ಲ; ಅದು ಪರಿಸರ ಸ್ನೇಹಿ ಜೀವನಶೈಲಿಯ ಸಂಕೇತವೂ ಆಗಿತ್ತು. ಬೇಸಿಗೆಯಲ್ಲಿ ಪಶುಗಳಿಗೆ ಆಹಾರ, ಮನೆಯ ಮೇಲ್ಚಾವಣಿಗೆ ಮುಚ್ಚುಗೆ, ಕೆಲವೊಮ್ಮೆ ಹಬ್ಬಗಳ ಅಲಂಕಾರಕ್ಕೂ ಇದೇ ಹುಲ್ಲು ಉಪಯೋಗವಾಗುತ್ತಿತ್ತು.


ಮೊದಲು ಪ್ರತೀ ಮನೇಲಿ ಬಣವೆ ಇತ್ತು. ಹಸು-ಎಮ್ಮೆ ಸಾಕಾಣಿಕೆ ಜಾಸ್ತಿ ಇತ್ತು. ಆದರೆ ಕಾಲ ಬದಲಾಗಿದೆ. ಇಂದು ಉಡುಪಿಯ ಅನೇಕ ಕಡೆಗಳಲ್ಲಿ ಆ ಬೈ ಹುಲ್ಲು ಬಣವೆಗಳು ಕಾಣೆಯಾಗುತ್ತಿವೆ. ಹೊಲಗಳ ಜಾಗದಲ್ಲಿ ಮನೆಗಳು, ಅಪಾರ್ಟ್‌ಮೆಂಟ್‌ಗಳು ಏಳುತ್ತಿವೆ. ಹಸು ಸಾಕಾಣಿಕೆ ಕಡಿಮೆಯಾಗಿದೆ. ಟ್ರ್ಯಾಕ್ಟರ್‌, ಯಂತ್ರ ಕೃಷಿ ಬಂದ ಮೇಲೆ ಹುಲ್ಲಿನ ಬಳಕೆ ಕೂಡ ಕುಂಠಿತವಾಗಿದೆ. ಮೊದಲು ಕೈಯಿಂದ ಕಟ್ಟುತ್ತಿದ್ದ ಬಣವೆಗಳನ್ನು ಈಗ ಕೆಲವೇ ಮನೆಗಳಲ್ಲಿ ಮಾತ್ರ ನೋಡಬಹುದು.ಹೊಸ ತಲೆಮಾರಿಗೆ ಇದರ ಮಹತ್ವವೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ,

ಕೆಲವು ರೈತರು ಮತ್ತು ಜನಪದಾಸಕ್ತರು ಈ ಸಂಸ್ಕೃತಿಯನ್ನು ಉಳಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಗ್ರಾಮೋತ್ಸವಗಳಲ್ಲಿ ಹುಲ್ಲು ಬಣವೆ ಕಟ್ಟುವ ಸ್ಪರ್ಧೆಗಳು, ಶಾಲೆಗಳಲ್ಲಿ ಕೃಷಿ ಪರಂಪರೆಯ ಪರಿಚಯ ಕಾರ್ಯಕ್ರಮಗಳು ನಡೆಯುತ್ತಿವೆ.

ಗ್ರಾಮೀಣ ಪರಂಪರೆ ಮತ್ತು ಕೃಷಿ ಸಂಸ್ಕೃತಿಯ ಪ್ರತೀಕವಾಗಿದ್ದ ಬೈ ಹುಲ್ಲು ಬಣವೆ ಇಂದು ನೆನಪುಗಳ ಭಾಗವಾಗುತ್ತಿದೆ. ಗ್ರಾಮೀಣ ಸಂಸ್ಕೃತಿಯ ಈ ಗುರುತು ಮುಂದಿನ ತಲೆಮಾರಿಗೆ ಉಳಿಸುವ ಪ್ರಯತ್ನವಾಗಬೇಕಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 

Ads on article

Advertise in articles 1

advertising articles 2

Advertise under the article