-->
 ಮದ್ಯದ ಅಮಲಿನಲ್ಲಿ ಚಿಕ್ಕಪ್ಪನನ್ನೇ ಕೊಲೆಗೈದ ಆರೋಪಿ

ಮದ್ಯದ ಅಮಲಿನಲ್ಲಿ ಚಿಕ್ಕಪ್ಪನನ್ನೇ ಕೊಲೆಗೈದ ಆರೋಪಿ


ಮದ್ಯದ ಅಮಲಿನಲ್ಲಿ ಯುವಕನೋರ್ವ ತನ್ನ ಸ್ವಂತ ಚಿಕ್ಕಪ್ಪನನ್ನೇ ಬಿಯರ್ ಬಾಟಲಿಯಿಂದ ಇರಿದು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕಾಡಬೆಟ್ಟು ನಿವಾಸಿ ಮಧುಸೂದನ್ (38) ಕೊಲೆಯಾದ ವ್ಯಕ್ತಿ. ಅವರ ಅಣ್ಣ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23) ಎಂಬಾತನೇ ಕೊಲೆ ಮಾಡಿದ ಯುವಕ. 

ಭಾನುವಾರ ರಾತ್ರಿ ಕೇಶವ ಪೂಜಾರಿ ಅವರ ಮನೆಯಲ್ಲಿ ದೈವದ 'ತಂಬಿಲ' ಸೇವೆ ಹಮ್ಮಿಕೊಳ್ಳಲಾಗಿತ್ತು. ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ವೇಳೆ, ಆರೋಪಿ ರಾಹುಲ್ ಮತ್ತು ಆತನ ಸ್ನೇಹಿತರು ಮನೆಯ ಹೊರಗೆ ಮದ್ಯ ಸೇವಿಸುತ್ತಾ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮಧುಸೂದನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಹುಲ್, ಮದ್ಯದ ಬಾಟಲಿಯಿಂದ ಚಿಕ್ಕಪ್ಪ ಮಧುಸೂದನ್ ಅವರ ಕುತ್ತಿಗೆಗೆ ಬಲವಾಗಿ ಇರಿದು ಸ್ಥಳದಿಂದ ತಕ್ಷಣ ಪರಾರಿಯಾಗಿದ್ದಾನೆ.

ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡ ಮಧುಸೂದನ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಕೊನೆಯುಸಿರೆಳೆದಿದ್ದರು.

ಕೊಲೆಯಾದ ಮಧುಸೂದನ್ ಅವಿವಾಹಿತರಾಗಿದ್ದು, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.  ಆರೋಪಿ ರಾಹುಲ್ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

Ads on article

Advertise in articles 1

advertising articles 2

Advertise under the article