ಫ್ರೆಂಡ್‌ಶಿಪ್ ಕ್ಲಬ್ ಸದಸ್ಯತ್ವದ ಆಮಿಷ: ವ್ಯಕ್ತಿಗೆ 5.11 ಲಕ್ಷ ರೂ. ಸೈಬರ್ ವಂಚನೆ
Monday, July 20, 2026
ಫ್ರೆಂಡ್‌ಶಿಪ್ ಕ್ಲಬ್ ಸದಸ್ಯತ್ವ ನೀಡುವುದಾಗಿ ನಂಬಿಸಿ 66 ವರ್ಷದ ವ್ಯಕ್ತಿಯಿಂದ ಸುಮಾರು 5.11 ಲಕ್ಷಕ್ಕೂ ಅಧಿಕ ಹಣ ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚನೆ ಪ್ರಕರಣ ದಾಖಲಾಗಿದೆ.
ಕಡಿಯಾಳಿ ನಿವಾಸಿ ಉಸ್ಮಾನ್ ಸಾಹೇಬ್ (66) ಅವರು ಫ್ರೆಂಡ್‌ಶಿಪ್ ಕ್ಲಬ್ ಸದಸ್ಯತ್ವ ಪಡೆಯುವ ಉದ್ದೇಶದಿಂದ ಹಂತ ಹಂತವಾಗಿ ಆರೋಪಿಗಳ ಸೂಚನೆಯಂತೆ ಹಣ ವರ್ಗಾಯಿಸಿದ್ದರು. ಜೂನ್ 27ರಂದು 29,000 ರೂ, ಜುಲೈ 9ರಂದು 84,882 ರೂ. ಹಾಗೂ ಎರಡು ಬಾರಿ ತಲಾ 99,000 ರೂ., ಬಳಿಕ ಜುಲೈ 14ರಂದು 2 ಲಕ್ಷ ಸೇರಿದಂತೆ ಒಟ್ಟು 5,11,882 ರೂಪಾಯಿ ಹಣವನ್ನು ಗೂಗಲ್ ಪೇ, ಕ್ಯೂಆರ್ ಕೋಡ್ ಸ್ಕ್ಯಾನ್ ಹಾಗೂ ಬ್ಯಾಂಕ್ ಖಾತೆ ಮೂಲಕ ಪಾವತಿಸಿದ್ದರು.
ಆದರೆ ಹಣ ಪಾವತಿಸಿದ ಬಳಿಕ ಯಾವುದೇ ಸದಸ್ಯತ್ವ ಅಥವಾ ಭರವಸೆ ನೀಡಿದ ಸೇವೆ ದೊರೆಯದ ಹಿನ್ನೆಲೆಯಲ್ಲಿ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅವರಿಗೆ ತಿಳಿದುಬಂದಿದೆ. ಹೀಗಾಗಿ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸೈಬರ್ ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.