ಶಿರೂರು ಸಮುದ್ರದಲ್ಲಿ ದೋಣಿ ಪಲ್ಟಿ: ಐವರು ಮೀನುಗಾರರು ಪಾರು, 7 ಲಕ್ಷಕ್ಕೂ ಅಧಿಕ ನಷ್ಟ
ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿಯೊಂದು ಮಗುಚಿಬಿದ್ದ ಘಟನೆ ಬೈಂದೂರಿನ ಶಿರೂರು ಸಮೀಪದ ಕೋಕ್ಲೇರಕಲ್ಲು ಸಮುದ್ರ ತೀರದಲ್ಲಿ ನಡೆದಿದೆ. ಘಟನೆಯಲ್ಲಿ ಐವರು ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ರಕ್ಷಿಸಲ್ಪಟ್ಟ ಮೀನುಗಾರರನ್ನು ಪಡುವರಿ ಗ್ರಾಮದ ತರಪತಿ ಅಳ್ವೆಕೋಡಿಯ ನಿವಾಸಿಗಳಾದ ನಾಗರಾಜ ಖಾರ್ವಿ, ಯೋಗೀಶ್ ಖಾರ್ವಿ, ರಾಜು ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ನಾಗರಾಜ ಖಾರ್ವಿ ಎಂದು ಗುರುತಿಸಲಾಗಿದೆ.
ಮಲ್ಪೆಯಲ್ಲಿ ಮೀನುಗಾರಿಕೆ ಮುಗಿಸಿ ಭಟ್ಕಳದತ್ತ ಹಿಂದಿರುಗುತ್ತಿದ್ದ ವೇಳೆ ಶಿರೂರು ಸಮುದ್ರ ತೀರದ ಕೋಕ್ಲೇರಕಲ್ಲು ಪ್ರದೇಶದ ಬಳಿ ಬಿರುಗಾಳಿ ಮತ್ತು ಮಳೆಯ ಪರಿಣಾಮ ಉಂಟಾದ ಬೃಹತ್ ಅಲೆಯೊಂದು ದೋಣಿಗೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ ದೋಣಿ ಮಗುಚಿಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ ದೋಣಿಯಲ್ಲಿದ್ದ ಐವರು ಮೀನುಗಾರರು ಜೀವ ರಕ್ಷಕ ಜಾಕೆಟ್ ಧರಿಸಿದ್ದರಿಂದ ಸಮುದ್ರದಲ್ಲಿ ತೇಲುತ್ತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಸಮೀಪದಲ್ಲೇ ಮೀನುಗಾರಿಕೆಯಲ್ಲಿ ತೊಡಗಿದ್ದ ಶೇಖರ್ ಖಾರ್ವಿ ಅವರು ಘಟನೆ ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿ, ಸಮುದ್ರದಲ್ಲಿ ಸಿಲುಕಿದ್ದ ಐವರನ್ನೂ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಅಪಘಾತದಲ್ಲಿ ಮೀನುಗಾರಿಕಾ ದೋಣಿ ಸಂಪೂರ್ಣ ಹಾನಿಗೊಳಗಾಗಿದ್ದು, ದೋಣಿಯ ಎಂಜಿನ್, ಜಿಪಿಎಸ್ ಸಾಧನ, ಫಿಶ್ ಫೈಂಡರ್, ಐದು ಸೆಟ್ ಮೀನುಗಾರಿಕಾ ಬಲೆಗಳು ಹಾಗೂ ಸುಮಾರು ₹30 ಸಾವಿರ ನಗದು ಸಮುದ್ರ ಪಾಲಾಗಿದೆ. ಘಟನೆಯಿಂದ 7 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಕರಾವಳಿ ಭದ್ರತಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.