ಬಾಲಕಿಯ ಕಣ್ಣಿನಿಂದ ಜೀವಂತ ಹುಳು ಹೊರತೆಗೆದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ವೈದ್ಯರು
ಬಲಗಣ್ಣಿನಲ್ಲಿ ನಿರಂತರ ಕೆಂಪಾಗುವಿಕೆ ಮತ್ತು ಕಿರಿಕಿರಿಯ ಸಮಸ್ಯೆಯಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕಿಯ ಕಣ್ಣಿನಿಂದ ಜೀವಂತ ಪರಾವಲಂಬಿ ಹುಳುವೊಂದನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ತಜ್ಞರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ. ಚಿಕಿತ್ಸೆ ಬಳಿಕ ಬಾಲಕಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ.
ಬಾಲಕಿಯ ಪೋಷಕರು ಆಕೆಯ ಬಲಗಣ್ಣಿನಲ್ಲಿ ಹಲವು ದಿನಗಳಿಂದ ಕಂಡುಬಂದ ಕೆಂಪಾಗುವಿಕೆ ಮತ್ತು ಅಸ್ವಸ್ಥತೆಯನ್ನು ಗಮನಿಸಿ ನೇತ್ರಶಾಸ್ತ್ರ ವಿಭಾಗಕ್ಕೆ ಕರೆತಂದಿದ್ದರು. ತಪಾಸಣೆ ವೇಳೆ ವೈದ್ಯರು ಕಣ್ಣಿನ ಕಂಜಂಕ್ಟಿವಾ ಪೊರೆಯ ಕೆಳಭಾಗದಲ್ಲಿ ಚಲಿಸುತ್ತಿದ್ದ ಸಣ್ಣ ರಚನೆಯನ್ನು ಪತ್ತೆಹಚ್ಚಿದರು. ಸ್ಲಿಟ್-ಲ್ಯಾಂಪ್ ಬಯೋಮೈಕ್ರೋಸ್ಕೋಪಿ ಪರೀಕ್ಷೆಯ ಬಳಿಕ ಕಣ್ಣಿನೊಳಗೆ ಜೀವಂತ ಪರಾವಲಂಬಿ ಇರುವ ಶಂಕೆ ವ್ಯಕ್ತವಾಯಿತು.
ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಯೋಗೀಶ್ ಎಸ್. ಕಾಮತ್ ಅವರ ಮಾರ್ಗದರ್ಶನದಲ್ಲಿ, ಡಾ. ಪ್ರಿಯಲ್ ಅಗರ್ವಾಲ್, ಅರಿವಳಿಕೆ ತಜ್ಞೆ ಡಾ. ಅಪರ್ಣಾ ಹಾಗೂ ಶಸ್ತ್ರಚಿಕಿತ್ಸಾ ತಂಡವು ಸಾಮಾನ್ಯ ಅರಿವಳಿಕೆಯಡಿಯಲ್ಲಿ ಎಕ್ಸಿಶನ್ ಬಯಾಪ್ಸಿ ನಡೆಸಿ ಹುಳುವನ್ನು ಹೊರತೆಗೆದರು.
ಹೊರತೆಗೆದ ಅಂಗಾಂಶದಿಂದ ತೆಳುವಾದ ದಾರದಂತಹ ಹುಳು ಹೊರಬಂದು ಚಲಿಸಲು ಆರಂಭಿಸಿದಾಗ ವೈದ್ಯರ ಶಂಕೆ ದೃಢಪಟ್ಟಿತು. ಕೆಎಂಸಿ ಮಣಿಪಾಲದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿನಯ್ ಖನ್ನಾ ಅವರು ಪರೀಕ್ಷೆ ನಡೆಸಿ ಇದನ್ನು ಡೈರೊಫಿಲೇರಿಯಾ ರೆಪೆನ್ಸ್ (Dirofilaria repens) ಎಂದು ಗುರುತಿಸಿದರು.
ಡೈರೊಫಿಲೇರಿಯಾಸಿಸ್ ಸೋಂಕು ಸಾಮಾನ್ಯವಾಗಿ ಸೋಂಕಿತ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಇದು ಮುಖ್ಯವಾಗಿ ನಾಯಿಗಳು ಮತ್ತು ಇತರ ಪ್ರಾಣಿಗಳಲ್ಲಿ ಕಂಡುಬರುವ ಝೂನೋಟಿಕ್ ಸೋಂಕಾಗಿದ್ದು, ಅಪರೂಪದ ಸಂದರ್ಭಗಳಲ್ಲಿ ಮನುಷ್ಯರಿಗೂ ಹರಡಬಹುದು. ಮಾನವರಲ್ಲಿ ಈ ಸೋಂಕು ಸಾಮಾನ್ಯವಾಗಿ ಚರ್ಮದ ಕೆಳಭಾಗ ಅಥವಾ ಕಣ್ಣಿನ ಸುತ್ತಮುತ್ತ ಕಾಣಿಸಿಕೊಳ್ಳುತ್ತದೆ.
“ಮಾನವರಲ್ಲಿ ಡೈರೊಫಿಲೇರಿಯಾಸಿಸ್ ಅಪರೂಪವಾದರೂ, ಕರಾವಳಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ನೇತ್ರ ತಜ್ಞರು ಇಂತಹ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ತ್ವರಿತ ರೋಗನಿರ್ಣಯ ಮತ್ತು ಸಮಯೋಚಿತ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಗುಣಮುಖವಾಗಲು ಸಾಧ್ಯ. ನಮ್ಮ ಪುಟ್ಟ ರೋಗಿ ಉತ್ತಮವಾಗಿ ಚೇತರಿಸಿಕೊಂಡಿರುವುದು ಸಂತಸದ ವಿಷಯ,” ಎಂದು ಡಾ. ಯೋಗೀಶ್ ಎಸ್. ಕಾಮತ್ ಹೇಳಿದರು.
ಈ ಕುರಿತು ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಮಾತನಾಡಿ, “ಈ ಪ್ರಕರಣವು ನಮ್ಮ ಆಸ್ಪತ್ರೆಯ ಸಂಘಟಿತ ಹಾಗೂ ಬಹುಶಿಸ್ತೀಯ ಚಿಕಿತ್ಸಾ ವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸುತ್ತದೆ. ಇಂತಹ ಸೋಂಕುಗಳನ್ನು ತಡೆಯಲು ಸೊಳ್ಳೆ ನಿಯಂತ್ರಣ ಕ್ರಮಗಳು ಮತ್ತು ಸಾಕುಪ್ರಾಣಿಗಳಿಗೆ ನಿಯಮಿತ ಪಶುವೈದ್ಯಕೀಯ ಆರೈಕೆಯ ಮಹತ್ವವನ್ನು ಇದು ನೆನಪಿಸುತ್ತದೆ,” ಎಂದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ತಂಡದ ಸಮಯೋಚಿತ ತಪಾಸಣೆ ಮತ್ತು ಚಿಕಿತ್ಸೆಯಿಂದ ಅಪರೂಪದ ಈ ಸೋಂಕನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗಿದೆ.
