-->
ಅಂಬಲಪಾಡಿ ಜನಾರ್ದನ ಮಹಾಕಾಳಿ ಸನ್ನಿಧಿಯಲ್ಲಿ ಮೈದಳೆದ ಪುಷ್ಪಲೋಕ

ಅಂಬಲಪಾಡಿ ಜನಾರ್ದನ ಮಹಾಕಾಳಿ ಸನ್ನಿಧಿಯಲ್ಲಿ ಮೈದಳೆದ ಪುಷ್ಪಲೋಕ


ಉಡುಪಿ ಜಿಲ್ಲೆಯ ಪ್ರಸಿದ್ಧ ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನ ಇಂದು ಅಕ್ಷರಶಃ ಭೂಲೋಕದ ಸ್ವರ್ಗದಂತೆ ಕಂಗೊಳಿಸಿತು. ಲಕ್ಷಾಂತರ ರೂಪಾಯಿ ಮೌಲ್ಯದ ಹೂವುಗಳಿಂದ ದೇವಸ್ಥಾನದ ಪ್ರತಿಯೊಂದು ಭಾಗವೂ ಅಲಂಕೃತಗೊಂಡಿದ್ದು, ಈ ಅಪರೂಪದ ಸೇವೆಯನ್ನು ಚಿಕ್ಕಬಳ್ಳಾಪುರದ ಭಕ್ತರು ವರ್ಷಂಪ್ರತಿ ಭಕ್ತಿಭಾವದಿಂದ ನೆರವೇರಿಸುತ್ತಿದ್ದಾರೆ. ಹೂವಿನ ಸುವಾಸನೆ, ಬಣ್ಣಗಳ ವೈಭವ ಮತ್ತು ಭಕ್ತಿಯ ಸಮರ್ಪಣೆ ಅಂಬಲಪಾಡಿ ದೇವಸ್ಥಾನದಲ್ಲಿ ಕಂಡು ಬಂತು.


ದೇವಾಲಯದ ಗೋಪುರ, ಪ್ರವೇಶ ದ್ವಾರ, ಗೋಡೆಗಳು, ಕಂಬಗಳು, ಗರ್ಭಗುಡಿಯ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಎಲ್ಲೆಡೆ ವರ್ಣರಂಜಿತ ಹೂವುಗಳಿಂದ ಕಂಗೊಳಿಸುತ್ತಿತ್ತು. ಹೂವಿನ ಪರಿಮಳ, ಬಣ್ಣಗಳ ಸೊಬಗು ಮತ್ತು ಧಾರ್ಮಿಕ ವಾತಾವರಣ ಒಂದಾಗಿ ದೇವಾಲಯವನ್ನು ಭೂಲೋಕದ ಸ್ವರ್ಗವನ್ನು ನೆನಪಿಸುವಂತೆ ಮಾಡಿತ್ತು. ದರ್ಶನಕ್ಕೆ ಬಂದ ಸಾವಿರಾರು ಭಕ್ತರು ಈ ಅಪರೂಪದ ಅಲಂಕಾರವನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಅದ್ಭುತ ಸೇವೆಯ ಹಿಂದೆ ಇರುವವರು ಚಿಕ್ಕಬಳ್ಳಾಪುರದ ಭಕ್ತವೃಂದ.ಈ ಅಲಂಕಾರ ಕೇವಲ ವೈಭವ ಪ್ರದರ್ಶನವಲ್ಲ. ಮಹಾಕಾಳಿಯ ಮೇಲಿನ ಅಪಾರ ಭಕ್ತಿಯಿಂದ ಚಿಕ್ಕಬಳ್ಳಾಪುರದ ಭಕ್ತರು ಹಲವು ವರ್ಷಗಳಿಂದ ಪ್ರತಿವರ್ಷ ಅಂಬಲಪಾಡಿಗೆ ಬಂದು ತಮ್ಮ ಕೈಯಾರೆ ಹೂವಿನ ಅಲಂಕಾರ ಮಾಡುವುದು ವಿಶೇಷ. ದೇವಿಯ ಅನುಗ್ರಹದಿಂದ ತಮ್ಮ ಬದುಕಿನಲ್ಲಿ ಉತ್ತಮ ಬದಲಾವಣೆಗಳಾಗಿವೆ ಎಂಬ ನಂಬಿಕೆಯಿಂದ ಅವರು ಈ ಸೇವೆಯನ್ನು ತಮ್ಮ ಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ.


ಶುಕ್ರವಾರ ಮಹಾಕಾಳಿ ದೇವಾಲಯಕ್ಕೆ ವಿಶೇಷ ಮಹತ್ವವಿರುವ ದಿನ. ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ದೇವಸ್ಥಾನ ಪ್ರವೇಶಿಸುತ್ತಿದ್ದಂತೆಯೇ ಹೂವಿನ ಪರಿಮಳ ಮತ್ತು ಮನಮೋಹಕ ಅಲಂಕಾರ ಭಕ್ತರನ್ನು ಆಕರ್ಷಿಸುತ್ತಿದೆ. ಶ್ರೀ ಜನಾರ್ಧನ ಸ್ವಾಮಿ ಹಾಗೂ ಶ್ರೀ ಮಹಾಕಾಳಿಯ ದರ್ಶನ ಪಡೆದು ಪುಷ್ಪಾಲಂಕಾರದ ದಿವ್ಯ ವೈಭವವನ್ನು ಭಕ್ತರು ಕಣ್ತುಂಬಿಕೊಂಡರು. ವಿವಿಧ ಬಣ್ಣಗಳ ಸುಗಂಧಭರಿತ ಹೂಗಳಿಂದ ರೂಪುಗೊಂಡ ಅಲಂಕಾರ ದೇವಾಲಯಕ್ಕೆ ಅಪೂರ್ವ ಕಳೆ ತಂದಿದ್ದು, ಆಗಮಿಸಿದ ಪ್ರತಿಯೊಬ್ಬ ಭಕ್ತರೂ ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂಭ್ರಮಿಸಿದರು.

ಒಂದು ಎಸಳು ಹೂವನ್ನೂ ಭಕ್ತಿಯಿಂದ ಅರ್ಪಿಸಿದರೆ ದೇವರು ಸ್ವೀಕರಿಸುತ್ತಾನೆ ಎಂಬ ನಂಬಿಕೆಯೊಂದಿಗೆ, ಚಿಕ್ಕಬಳ್ಳಾಪುರದ ಭಕ್ತರು ಅಂಬಲಪಾಡಿ ಮಹಾಕಾಳಿ ಸನ್ನಿಧಿಯಲ್ಲಿ ವಿಶೇಷ ಪುಷ್ಪಾಲಂಕಾರ ಸೇವೆ ನೆರವೇರಿಸಿ ತಮ್ಮ ಭಕ್ತಿ, ಪ್ರೀತಿ ಮತ್ತು ಕೃತಜ್ಞತೆಯನ್ನು ದೇವಿಗೆ ಸಮರ್ಪಿಸಿದ್ದಾರೆ.


 

Ads on article

Advertise in articles 1

advertising articles 2

Advertise under the article