-->
ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳಿಗೆ ಜೆಡಿಎಸ್ ನಿಯೋಗ ಭೇಟಿ

ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳಿಗೆ ಜೆಡಿಎಸ್ ನಿಯೋಗ ಭೇಟಿ


ರಾಜ್ಯದಲ್ಲಿ ಮುಂಗಾರು ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ರಚಿಸಲಾದ ಜನತಾದಳ (ಜಾತ್ಯತೀತ) ಅಧ್ಯಯನ ತಂಡವು ಇಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಕೋಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ಅಧ್ಯಯನ ತಂಡದ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ನೇತೃತ್ವ ವಹಿಸಿದ್ದರು. 


ಬೆಳಿಗ್ಗೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ, ಯುವ ಘಟಕ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಸೇರಿದಂತೆ ಪಕ್ಷದ ಪ್ರಮುಖರೊಂದಿಗೆ ನಾಗೋರಿ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ತಂಡ, ಇತ್ತೀಚೆಗೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿತು. ಅಲ್ಲದೆ, ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ ಮಳೆಗಾಲದಲ್ಲಿ ಎದುರಾಗುತ್ತಿರುವ ಅಪಾಯಗಳು, ಭೂಕುಸಿತಕ್ಕೆ ಕಾರಣವಾಗಿರುವ ಅಂಶಗಳು ಹಾಗೂ ತಕ್ಷಣ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿತು.

ಈ ವೇಳೆ ಮಾತನಾಡಿದ ಎಸ್.ಎಲ್. ಭೋಜೆಗೌಡ ಅವರು, ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ, ಪುನರ್ವಸತಿ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಅಪಾಯದ ಅಂಚಿನಲ್ಲಿರುವ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಶಾಶ್ವತ ತಡೆಗೋಡೆ, ನೀರು ಹರಿಸುವ ವ್ಯವಸ್ಥೆ ಹಾಗೂ ಭೂಕುಸಿತ ತಡೆ ಕ್ರಮಗಳನ್ನು ತುರ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಬಳಿಕ ಅಧ್ಯಯನ ತಂಡವು ಸೋಮೇಶ್ವರ ಬಟ್ಟಪಾಡಿ ಪ್ರದೇಶಕ್ಕೆ ಭೇಟಿ ನೀಡಿ ತೀವ್ರ ಕಡಲುಕೊರೆತದಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ಪರಿಶೀಲಿಸಿತು. ಸಮುದ್ರದ ಅಲೆಗಳ ಅಬ್ಬರದಿಂದ ಮನೆಗಳು, ರಸ್ತೆಗಳು ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಉಂಟಾಗುತ್ತಿರುವ ಹಾನಿಯನ್ನು ವೀಕ್ಷಿಸಿದ ತಂಡವು ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿತು.

ಈ ಸಂದರ್ಭದಲ್ಲಿ ಸೇವ್ ಬಟ್ಟಪಾಡಿ ಅಧ್ಯಕ್ಷ ಸುಕೇಶ್ ಜಿ.ಕೆ. ಉಚ್ಚಿಲ್ ಅವರು, ವರ್ಷದಿಂದ ವರ್ಷಕ್ಕೆ ಕಡಲುಕೊರೆತ ತೀವ್ರಗೊಳ್ಳುತ್ತಿದ್ದು, ಸ್ಥಳೀಯರು ಆತಂಕದ ನಡುವೆ ಜೀವನ ನಡೆಸುವಂತಾಗಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಎಲ್. ಭೋಜೆಗೌಡ ಅವರು, ಕಡಲುಕೊರೆತ ತಡೆಗೆ ಸರ್ಕಾರವು ವೈಜ್ಞಾನಿಕ ಹಾಗೂ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಬೇಕು. ಅಗತ್ಯವಿರುವ ಕಡೆ ತಕ್ಷಣ ತಡೆಗೋಡೆ ನಿರ್ಮಾಣ, ಸಮುದ್ರ ಸಂರಕ್ಷಣಾ ಕಾಮಗಾರಿಗಳಿಗೆ ವೇಗ ನೀಡುವುದು ಹಾಗೂ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವುದು ಅನಿವಾರ್ಯ ಎಂದು ಹೇಳಿದರು.

ನಂತರ ಅಧ್ಯಯನ ತಂಡವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಕವರಿಗೆ ಭೇಟಿ ನೀಡಿ, ನಾಗೋರಿ ಭೂಕುಸಿತ, ಸೋಮೇಶ್ವರ ಕಡಲುಕೊರೆತ ಸೇರಿದಂತೆ ಜಿಲ್ಲೆಯ ವಿವಿಧ ಮಳೆ ಹಾನಿ ಪ್ರದೇಶಗಳ ಕುರಿತು ಸಮಗ್ರ ಮನವಿ ಸಲ್ಲಿಸಿತು. ಸ್ಥಳ ಪರಿಶೀಲನೆಯ ವೇಳೆ ಕಂಡುಬಂದ ಸಮಸ್ಯೆಗಳು, ಸಾರ್ವಜನಿಕರಿಂದ ಪಡೆದ ಮಾಹಿತಿ ಹಾಗೂ ಕೈಗೊಳ್ಳಬೇಕಾದ ತುರ್ತು ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಸಲಾಯಿತು.

ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ದರ್ಶನ್ ಕವರು, ಈಗಾಗಲೇ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರೆ, ಉಳಿದಿರುವ ಸಮಸ್ಯೆಗಳಿಗೂ ಆದ್ಯತೆ ನೀಡಿ ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮೀನುಗಾರ ಘಟಕದ ರಾಜ್ಯಾಧ್ಯಕ್ಷ ರತ್ನಕರ್ ಸುವರ್ಣ, ಕಾರ್ಯಾಧ್ಯಕ್ಷ ಇಕ್ಬಲ್ ಮುಲ್ಕಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಾಧ್ಯಕ್ಷ ಪುಷ್ಪರಾಜನ್, ಯುವ ಘಟಕ ಉತ್ತರ ಕ್ಷೇತ್ರಾಧ್ಯಕ್ಷ ರತೀಶ್ ಕರ್ಕೇರ, ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಪ್ರಕಾಶ್ ಅಸೈಗೋಳಿ, ಕಾನೂನು ಘಟಕದ ಅಧ್ಯಕ್ಷೆ ಭಾರತಿ ಪುಷ್ಪರಾಜನ್, ಪಕ್ಷದ ಮುಖಂಡರಾದ ಉಮೇಶ್ ವೈ. ಗೌಡ, ಸುಮಿತ್ ಸುವರ್ಣ, ಸುಷಂತ್, ಜಾವೀದ್, ಸುಮತಿ ಹೆಗ್ಡೆ, ಪ್ರಶಾಂತ್ ಭಟ್ ಕಡಬ, ಪ್ರಾನ್ಸಿಸ್, ನಜೀರ್ ಸಾಮಾಣಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article