-->
ಜಿಲ್ಲಾಧಿಕಾರಿ ಕಚೇರಿ ಮಾರ್ಗವೇ ಹಾಳು: ಮಣಿಪಾಲದ ರಸ್ತೆ ದುಸ್ಥಿತಿಗೆ ಪ್ರತಿಭಟನೆಯ ಎಚ್ಚರಿಕೆ

ಜಿಲ್ಲಾಧಿಕಾರಿ ಕಚೇರಿ ಮಾರ್ಗವೇ ಹಾಳು: ಮಣಿಪಾಲದ ರಸ್ತೆ ದುಸ್ಥಿತಿಗೆ ಪ್ರತಿಭಟನೆಯ ಎಚ್ಚರಿಕೆ


ಅಭಿವೃದ್ಧಿಯ ಹೆಸರಿನಲ್ಲಿ ಗುರುತಿಸಿಕೊಂಡಿರುವ ಮಣಿಪಾಲದ ಪ್ರಮುಖ ರಸ್ತೆಯೊಂದು ಇದೀಗ ಅವ್ಯವಸ್ಥೆಯ ಸಂಕೇತವಾಗಿ ಮಾರ್ಪಟ್ಟಿದೆ. ಜಿಲ್ಲಾಡಳಿತ ಕಚೇರಿಗೆ ಸಂಪರ್ಕ ಕಲ್ಪಿಸುವ ಅತ್ಯಂತ ಪ್ರಮುಖ ಮಾರ್ಗವಾಗಿರುವ ಮಣಿಪಾಲ ನಗರಸಭೆ ವಾಣಿಜ್ಯ ಸಂಕೀರ್ಣದ ಎದುರಿನ ರಸ್ತೆ ಹೊಂಡಗಳಿಂದ ತುಂಬಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಪ್ರತಿದಿನವೂ ಆತಂಕದ ಪ್ರಯಾಣ ಅನಿವಾರ್ಯವಾಗಿದೆ.

ರಸ್ತೆಯ ಮಧ್ಯಭಾಗದಲ್ಲೇ ನಿರ್ಮಾಣಗೊಂಡಿರುವ ದೊಡ್ಡ ದೊಡ್ಡ ಹೊಂಡಗಳು ಮಳೆ ಬಂದಾಗ ನೀರು ತುಂಬಿಕೊಂಡು ಕಾಣಿಸದ ಸ್ಥಿತಿಗೆ ತಲುಪುತ್ತವೆ. ಇದರಿಂದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಳ್ಳುವ ಅಪಾಯ ಎದುರಾಗಿದ್ದು, ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಸಾರ್ವಜನಿಕರ ಓಡಾಟ ಹೆಚ್ಚಿರುವ ಈ ಪ್ರದೇಶವೇ ಇದೀಗ ಅಪಾಯದ ತಾಣವಾಗಿ ಪರಿಣಮಿಸಿರುವುದು ವಿಪರ್ಯಾಸವಾಗಿದೆ.

ಜಿಲ್ಲಾಡಳಿತ ಕಚೇರಿಗೆ ತೆರಳುವ ದಾರಿ ಆಗಿರುವುದರಿಂದ ಪ್ರತಿದಿನ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸಾವಿರಾರು ಮಂದಿ ಈ ಮಾರ್ಗವನ್ನು ಬಳಸುತ್ತಾರೆ. ಆದರೆ ಸಮಸ್ಯೆ ಕಣ್ಣೆದುರಿಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೆ ಶಾಶ್ವತ ದುರಸ್ತಿ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ರಸ್ತೆಯ ದುಸ್ಥಿತಿಯನ್ನು ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಪರಿಣಾಮಕಾರಿ ಕ್ರಮವಾಗದ ಹಿನ್ನೆಲೆಯಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಸಾರ್ವಜನಿಕರ ಸಹಕಾರದೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಜುಲೈ 9ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಮಣಿಪಾಲ ನಗರಸಭೆ ವಾಣಿಜ್ಯ ಸಂಕೀರ್ಣದ ಎದುರು ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಪ್ರತಿಭಟನೆ ನಡೆಯಲಿದೆ. “ಜನರ ಜೀವಕ್ಕೆ ಅಪಾಯ ತಂದೊಡ್ಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ರಸ್ತೆ ದುರಸ್ತಿ ಮಾಡಬೇಕು. ಸಾರ್ವಜನಿಕರ ಸಂಕಷ್ಟವನ್ನು ಗಮನ ಸೆಳೆಯಲು ಈ ವಿನೂತನ ಪ್ರತಿಭಟನೆ ಆಯೋಜಿಸಲಾಗಿದೆ” ಎಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಇನ್ನಾದರೂ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡು ಈ ರಸ್ತೆಗೆ ಕಾಯಕಲ್ಪ ನೀಡಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ. 

Ads on article

Advertise in articles 1

advertising articles 2

Advertise under the article