ಅಸ್ವಸ್ಥಗೊಂಡ ವೇಟ್ ಲಿಫ್ಟರ್ ವಿಶು ಮೊಗವೀರ: ಜಿಲ್ಲಾಸ್ಪತ್ರೆಗೆ ದಾಖಲು
Wednesday, August 19, 2026
ಸಾರ್ವಜನಿಕ ಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬೈಕಾಡಿಯ ವೇಟ್ ಲಿಫ್ಟರ್ ವಿಶು ಮೊಗವೀರ (40) ಅವರನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ಬ್ರಹ್ಮಾವರದ ಆಂಬುಲೆನ್ಸ್ ಸಿಬ್ಬಂದಿ ಸುರೇಶ್ ಶೆಟ್ಟಿಗಾರ್ ಅವರ ಸಹಾಯದಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವಿಶು ಮೊಗವೀರ ಅವರು ಹಲವು ವರ್ಷಗಳ ಹಿಂದೆ ವೇಟ್ ಲಿಫ್ಟಿಂಗ್‌ನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದ ಸಾಧಕರಾಗಿದ್ದಾರೆ.
ಸದ್ಯ ಅಸ್ವಸ್ಥ ಸ್ಥಿತಿಯಲ್ಲಿದ್ದ ವಿಶು ಮೊಗವೀರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಚಯವಿರುವವರು ಅಥವಾ ಸಂಬಂಧಿಕರು ತಕ್ಷಣ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಅಂಬಲಪಾಡಿ ಅವರು ಮನವಿ ಮಾಡಿದ್ದಾರೆ.
ಅಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸಮಯೋಚಿತವಾಗಿ ಗಮನಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯ ನೆರವು ನೀಡಿದ ವಿಶು ಶೆಟ್ಟಿ ಹಾಗೂ ಸುರೇಶ್ ಶೆಟ್ಟಿಗಾರ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.