-->
‘ಗುಚ್ಚಿ ಗರ್ಲ್’ ಮೂಲಕ ವಿಕ್ರಂ ರವಿಚಂದ್ರನ್ ಗ್ರ್ಯಾಂಡ್ ಕಮ್‌ಬ್ಯಾಕ್

‘ಗುಚ್ಚಿ ಗರ್ಲ್’ ಮೂಲಕ ವಿಕ್ರಂ ರವಿಚಂದ್ರನ್ ಗ್ರ್ಯಾಂಡ್ ಕಮ್‌ಬ್ಯಾಕ್


ಸ್ಯಾಂಡಲ್‌ವುಡ್‌ನ ನಟ ವಿಕ್ರಂ ರವಿಚಂದ್ರನ್ ಸುದೀರ್ಘ ಐದು ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ತಮ್ಮ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಬಹುನಿರೀಕ್ಷಿತ ‘ಮುಧೋಳ್’ ಚಿತ್ರದ ಮೊದಲ ಹಾಡು ‘ಗುಚ್ಚಿ ಗರ್ಲ್’ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಹಾಡು ಬಿಡುಗಡೆಯಾಗುತ್ತಿದ್ದಂತೆ ಚಿತ್ರದ ಮೇಲಿನ ನಿರೀಕ್ಷೆಯೂ ಹೆಚ್ಚಾಗಿದೆ.

ಸ್ಯಾಂಡಲ್‌ವುಡ್‌ನ ಶೋಮ್ಯಾನ್ ಖ್ಯಾತಿಯ ನಿರ್ದೇಶಕ ಪ್ರೇಮ್ ‘ಗುಚ್ಚಿ ಗರ್ಲ್’ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಅವರು, ತಮ್ಮ ‘ಬಾಸ್’ ರವಿಚಂದ್ರನ್ ಅವರ ಪುತ್ರನ ಸಿನಿಮಾದ ಹಾಡನ್ನು ಬಿಡುಗಡೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು. ‘ಮುಧೋಳ್’ ಚಿತ್ರದ ಮುಂದಿನ ಪ್ರತಿಯೊಂದು ಬೆಳವಣಿಗೆಯಲ್ಲೂ ಚಿತ್ರತಂಡದ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

‘ಮುಧೋಳ್’ ಪಕ್ಕಾ ಕಮರ್ಷಿಯಲ್ ಹಾಗೂ ಸಸ್ಪೆನ್ಸ್ ಓರಿಯೆಂಟೆಡ್ ಸಿನಿಮಾ ಎಂದು ವಿಕ್ರಂ ರವಿಚಂದ್ರನ್ ತಿಳಿಸಿದ್ದಾರೆ. ಬಿಡುಗಡೆಯಾಗಿರುವ ‘ಗುಚ್ಚಿ ಗರ್ಲ್’ ಹಾಡಿನಲ್ಲಿ ನಾಯಕಿ ಸಂಜನಾ ಆನಂದ್ ಹಾಗೂ ಬಾಲಿವುಡ್ ನಟಿ ಇಷಿತಾ ರಾಜ್ ಗಮನ ಸೆಳೆಯುವಂತೆ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ವಿಕ್ರಂ ಕೂಡ ಕಾಣಿಸಿಕೊಂಡಿದ್ದು, ಅವರ ಡ್ಯಾನ್ಸ್ ಸ್ಟೆಪ್‌ಗಳು ಅಭಿಮಾನಿಗಳ ಗಮನ ಸೆಳೆದಿವೆ.

ಚಿತ್ರದ ಮತ್ತೊಂದು ವಿಶೇಷವೆಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಾರ್ಗದರ್ಶನ. ವಿಕ್ರಂ ಅವರ ಸಿನಿಮಾ ಪ್ರಯಾಣಕ್ಕೆ ತಂದೆಯ ಸಂಪೂರ್ಣ ಸಲಹೆ ಹಾಗೂ ಮಾರ್ಗದರ್ಶನವಿದೆ ಎನ್ನಲಾಗಿದೆ. ‘ಮುಧೋಳ್’ ಎಂಬ ವಿಭಿನ್ನ ಶೀರ್ಷಿಕೆಯನ್ನು ಆಯ್ಕೆ ಮಾಡಿದ್ದೂ ರವಿಚಂದ್ರನ್ ಅವರೇ ಎಂಬುದು ಚಿತ್ರದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ನಟನೆಯ ಜತೆಗೆ ವಿಕ್ರಂ ರವಿಚಂದ್ರನ್ ನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ಕಲೆ ಮಾತ್ರವಲ್ಲದೆ ವ್ಯವಹಾರಿಕ ದೃಷ್ಟಿಕೋನವೂ ಮುಖ್ಯ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ನಿರ್ಮಾಪಕರು ಹೂಡಿಕೆ ಮಾಡುವ ಹಣಕ್ಕೆ ತಕ್ಕಂತೆ ಬಿಸಿನೆಸ್ ತಂದುಕೊಡುವ ಜವಾಬ್ದಾರಿ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಮೇಲೂ ಇದೆ ಎಂದು ಅವರು ಹೇಳಿದ್ದಾರೆ.

ವಿಜಯ್ ಟಾಟಾ ಹಾಗೂ ಅಮೃತ ಟಾಟಾ ನಿರ್ಮಾಣದ ‘ಮುಧೋಳ್’ ಚಿತ್ರಕ್ಕೆ ಕಾರ್ತಿಕ್ ರಂಜನ್ ನಿರ್ದೇಶನವಿದೆ. ವಿಕ್ರಂ ರವಿಚಂದ್ರನ್ ನಾಯಕನಾಗಿ ನಟಿಸಿದ್ದು, ಸಂಜನಾ ಆನಂದ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಭಿಲಾಷ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

ಸದ್ಯ ‘ಗುಚ್ಚಿ ಗರ್ಲ್’ ಹಾಡಿನ ಮೂಲಕ ಸದ್ದು ಮಾಡುತ್ತಿರುವ ‘ಮುಧೋಳ್’ ಚಿತ್ರದ ಮುಂದಿನ ಅಪ್‌ಡೇಟ್‌ಗಳತ್ತ ಸಿನಿಪ್ರೇಕ್ಷಕರ ಚಿತ್ತ ನೆಟ್ಟಿದೆ.

Ads on article

Advertise in articles 1

advertising articles 2

Advertise under the article