-->
ಸಚಿವ ನಾಗೇಂದ್ರ ರಾಜಿನಾಮೆಗೆ ಉಡುಪಿ ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಆಗ್ರಹ

ಸಚಿವ ನಾಗೇಂದ್ರ ರಾಜಿನಾಮೆಗೆ ಉಡುಪಿ ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಆಗ್ರಹ


ವಾಲ್ಮಿಕಿ ನಿಗಮದ ಮೂಲಕ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನು ದುರುಪಯೋಗ ಮಾಡಿದ್ದ ನೂತನ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ. 

 ಕಳೆದ ಎರಡು ವರ್ಷಗಳ ಹಿಂದೆ ತೆಲಂಗಾಣ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ಸರಕಾರ ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯ ವಾಲ್ಮಿಕಿ ನಿಗಮದಲ್ಲಿ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಮೀಸಲಿರಿಸಿದ್ದ ಸುಮಾರು 187 ಕೋಟಿ ಹಣವನ್ನು ಸಚಿವರಾಗಿದ್ದ ಬಿ. ನಾಗೇಂದ್ರರವರ ಸೂಚನೆಯ ಮೇರೆಗೆ ಆಕ್ರಮವಾಗಿ ಬೇರೆ ಬೇರೆ ಖಾಸಗಿ ಖಾತೆಗಳಿಗೆ ವರ್ಗಾಯಿಸಿರುವುದು ಎಲ್ಲರಿಗೂ ತಿಳಿದಿದೆ.

 ಈ ವಿಚಾರದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ರವರು ವಿಧಾನಸಭೆಯಲ್ಲಿ ನಿಗಮದಲ್ಲಿ ಹಗರಣವಾಗಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಬಿ. ನಾಗೇಂದ್ರ ವಿರುದ್ಧ ಸಿಬಿಐ ಮೂರು ದೋಷಾರೋಪ ಪಟ್ಟಿ ಸಲ್ಲಿಸಿದೆ. ಜಾರಿ ನಿರ್ದೇಶನಾಲಯ ಕೂಡ ಒಂದು ಚಾರ್ಜ್ ಶೀಟ್ ಹಾಕಿದೆ. ಈ ವಿಚಾರಕ್ಕೆ ಬಿ. ನಾಗೇಂದ್ರರವರು ಜೈಲು ಸೇರಿದ್ದು, ನಂತರ ಜಾಮೀನನ ಮೇಲೆ ಬಿಡುಗಡೆ ಗೊಂಡಿದ್ದಾರೆ.

ಈಗ ತಾವು ಮುಖ್ಯಮಂತ್ರಿಗಳಾಗಿದ್ದು, ಈ ಎಲ್ಲಾ ವಿಚಾರವನ್ನು ತಿಳಿದವರಾಗಿದ್ದರೂ ವಿಚಾರಣಾ ಹಂತದಲ್ಲಿರುವ ಶಾಸಕರಾದ ಬಿ. ನಾಗೇಂದ್ರ ಅವರನ್ನು ತಮ್ಮ ಸಚಿವ ಸಂಪುಟದಲ್ಲಿ ಸಚಿವರಾಗಿಸಿದ್ದು ನಮ್ಮ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. 

ಕಳೆದ ಮೂರು ವರ್ಷಗಳಿಂದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ವಾಲ್ಮೀಕಿ ನಿಗಮದಿಂದ ಉಡುಪಿ ಜಿಲ್ಲೆಯ ಪರಿಶಿಷ್ಟ ಪಂಗಡದವರ ಅಭಿವೃದ್ಫಿಗೆ ಒಂದು ನಯಪೈಸೆ ಬಿಡುಗಡೆ ಮಾಡದೆ ಇರುವುದು ಕೂಡ ಅನ್ಯಾಯವಾಗಿದೆ. ಆದ್ದರಿಂದ ಜಿಲ್ಲೆಗೆ ನಿಗಮದ ಮೂಲಕ ಅನುದಾನ ಬಿಡುಗಡೆಯಾಗಬೇಕು. ಅಲ್ಲದೆ ಅಕ್ರಮ ಹಣ ವರ್ಗಾವಣೆಯಲ್ಲಿ ಬಾಗಿಯಾಗಿ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ‌ ನಾಯಕ್, ಜಿಲ್ಲಾ ಬಿಜೆಪಿ ವಕ್ತಾರ ಮಧುಕರ ಮುದ್ರಾಡಿ, ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಉಮೇಶ್ ಎ.ನಾಯ್ಕ್ ಚೇರ್ಕಾಡಿ, ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಬುಜಂಗ ನಾಯ್ಕ್ ಮಣಿಪಾಲ್, ಉಪಾಧ್ಯಕ್ಷ ರಮೇಶ್ ನಾಯ್ಕ್ ಕೊಡ್ಲಾಡಿ, ಎಸ್ಟಿ ಮೋರ್ಚಾದ ಪ್ರದಾನ ಕಾರ್ಯದರ್ಶಿ ಉಮೇಶ್ ನಾಯ್ಕ್ ನೂಜಿನಬೈಲು ಮತ್ತು ಸುಭಾಸ್ ನಾಯ್ಕ್ ಪೆರ್ಡೂರ್, ನಗರ ಎಸ್ಟಿ ಮೋರ್ಚಾ ಅಧ್ಯಕ್ಷ ಸುಮಲತ ನಾಯ್ಕ್, ಉಪಾದ್ಯಕ್ಷ ನವೀನ್ ನಾಯ್ಕ್, ಪ್ರದಾನ ಕಾರ್ಯದರ್ಶಿ ಸುಗುಣ ನಾಯ್ಕ್ ಇಂದ್ರಾಳಿ ಈ ಸಂದರ್ಭ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article