ಬಜಗೋಳಿಯಲ್ಲಿ ಸೆ.20ರಂದು ಉಚಿತ ವೈದ್ಯಕೀಯ ಶಿಬಿರ
Saturday, September 19, 2026
ಆರೋಗ್ಯಭಾರತಿ ಮಂಗಳೂರು, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ, ಉಡುಪಿ ಜಿಲ್ಲಾ ಮಲೆಕುಡಿಯರ ಸಂಘ, ರೇಂಜರ್ಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲ್ಪ ಟ್ರಸ್ಟ್ ಮಂಗಳೂರು ಹಾಗೂ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಸೆ.20ರಂದು ಬಜಗೋಳಿಯ ಮಲೆಕುಡಿಯ ಸಭಾಭವನದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಿಬಿರವನ್ನು ಉದ್ಘಾಟಿಸಲಿದ್ದು, ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರಿಂದ ಎಲುಬು ಮತ್ತು ಕೀಲು ಚಿಕಿತ್ಸೆ, ಚರ್ಮರೋಗ, ಇಸಿಜಿ ಹಾಗೂ ಜನರಲ್ ಮೆಡಿಸಿನ್ (ಥೈರಾಯ್ಡ್ ಚಿಕಿತ್ಸೆ) ವಿಭಾಗಗಳಲ್ಲಿ ತಪಾಸಣೆ ನಡೆಸಲಾಗುವುದು. ಅಗತ್ಯವಿರುವವರಿಗೆ ಸೂಕ್ತ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು.
ಇದೇ ವೇಳೆ ಐ ಕ್ಲಿನಿಕ್‌ನ ಡಾ. ಶ್ರೀಪತಿ ಕಾಮತ್ ನೇತೃತ್ವದಲ್ಲಿ ಕಣ್ಣಿನ ತಪಾಸಣೆ ನಡೆಸಲಾಗುತ್ತಿದ್ದು, ಅಗತ್ಯವಿರುವವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ.
ಆರೋಗ್ಯಭಾರತಿ ಗೌರವಾಧ್ಯಕ್ಷ ಡಾ. ಮುರಳೀ ಮೋಹನ್ ಚೂಂತಾರು ಹಾಗೂ ಪ್ರಮೀಳಾ ಕೆ. ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ತಿಳಿಸಿದ್ದಾರೆ.