ಹಿಂದೂಸ್ಥಾನ ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ರಾಷ್ಟ್ರ: ಗುರ್ಮೆ ಸುರೇಶ್ ಶೆಟ್ಟಿ
ಮಾನವನು ಕೇವಲ ಸಂಸಾರಮುಖಿಯಾಗಿ ಬದುಕದೆ ಸಮಾಜಮುಖಿಯಾಗಿ ಜೀವಿಸಿ ಸಮಾಜದ ಋಣ ತೀರಿಸಬೇಕು. ಹಿಂದೂಸ್ಥಾನವು ಜಗತ್ತಿನಲ್ಲಿಯೇ ಶ್ರೇಷ್ಠ ಆಧ್ಯಾತ್ಮಿಕ ರಾಷ್ಟ್ರವಾಗಿದ್ದು, ಹಬ್ಬಗಳು ನಮ್ಮ ನಾಡಿನ ಅಸ್ಮಿತೆಯ ಪ್ರತೀಕಗಳಾಗಿವೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಹೊರಾಂಗಣದಲ್ಲಿ ಗುಜ್ಜಾಡಿ ನರಸಿಂಹ ನಾಯಕ್ ವೇದಿಕೆಯಲ್ಲಿ ಶನಿವಾರ ನಡೆದ ಉಡುಪಿ ಗಣೇಶೋತ್ಸವ ಸಮಿತಿಯ 60ನೇ ವರ್ಷದ ವಜ್ರ ಮಹೋತ್ಸವದ ಧಾರ್ಮಿಕ ಸಭೆ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಪರಂಪರೆಯಲ್ಲಿ ದಿವ್ಯತೆ ಮತ್ತು ಭವ್ಯತೆ ಅಡಗಿದೆ. ಶ್ರೀರಾಮಚಂದ್ರ ಹಾಗೂ ಸತ್ಯಹರಿಶ್ಚಂದ್ರರಂತಹ ಮಹನೀಯರನ್ನೂ ದುರಿತಗಳು ಬಿಡಲಿಲ್ಲ. ಆದರೆ ಭಗವಂತನ ಹಾಗೂ ವಿಘ್ನನಿವಾರಕ ಗಣೇಶನ ಅನುಗ್ರಹವಿದ್ದರೆ ಸಕಲ ಕಷ್ಟಗಳು ದೂರವಾಗುತ್ತವೆ ಎಂದರು.
ಹೋಟೆಲ್ ಉದ್ಯಮಿ ನಾಗೇಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ, ಸಮಾಜ ಸೇವೆ ಅತ್ಯಂತ ಶ್ರೇಷ್ಠ ಕಾರ್ಯವಾಗಿದ್ದು, ಗಣೇಶೋತ್ಸವದ ಮೂಲಕ ಕಡಿಯಾಳಿ ಸಮಿತಿಯು ಸಮಾಜ ಸೇವೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ವಾರಗಳ ಕಾಲ ಯಶಸ್ವಿಯಾಗಿ ಗಣೇಶೋತ್ಸವ ಆಯೋಜಿಸಿದ ಸಮಿತಿಯ ಪದಾಧಿಕಾರಿಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಕಡಿಯಾಳಿ ಮಹಿಷಮರ್ಧಿನಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಜಯ ರಾಘವ ರಾವ್ ಮಾತನಾಡಿ, ಗಣೇಶೋತ್ಸವ ಆಚರಣೆಗೆ ಪೊಲೀಸ್ ಅನುಮತಿ ಸೇರಿದಂತೆ ಕಾನೂನು ಕಟ್ಟಳೆಗಳ ಚೌಕಟ್ಟು ಇರಬಾರದು. ಹಿಂದೂಸ್ಥಾನದಲ್ಲಿ ಹಿಂದುಗಳ ಹಬ್ಬಗಳ ಆಚರಣೆಗೆ ಎಲ್ಲ ರೀತಿಯ ಸಹಕಾರ ದೊರೆಯುವಂತಾಗಬೇಕು. ಗಣೇಶನ ಹೆಸರಿನಲ್ಲಿ ಎಲ್ಲ ಹಿಂದೂ ಸಂಘಟನೆಗಳು ಒಂದಾಗಬೇಕು ಎಂದು ಹೇಳಿದರು.
ಕರೊನಾ ಸಂದರ್ಭದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಶಿಕ್ಷಣಕ್ಕೆ ಸಹಕರಿಸುತ್ತಿರುವ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 25 ವಿದ್ಯಾರ್ಥಿಗಳಿಗೆ ಧನಸಹಾಯ ವಿತರಿಸಲಾಯಿತು.
ಸಮಿತಿಯ ಅಧ್ಯಕ್ಷ ಪ. ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ್ ಆಚಾರ್ಯ, ಮತ್ಸ್ಯೋದ್ಯಮಿ ಆನಂದ್ ಸುವರ್ಣ ಮಲ್ಪೆ, ಆಭರಣ ಜ್ಯುವೆಲ್ಲರ್ಸ್ ಬೆಂಗಳೂರಿನ ಆಡಳಿತ ನಿರ್ದೇಶಕ ಡಾ. ಪ್ರತಾಪ್ ಮಧುಕರ್ ಕಾಮತ್, ವಜ್ರ ಮಹೋತ್ಸವ ಸಮಿತಿ ಕೋಶಾಧಿಕಾರಿ ಕೆ. ಮಂಜುನಾಥ್ ಹೆಬ್ಬಾರ್, ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ವಲ್ಲಭ ಭಟ್ ಉಪಸ್ಥಿತರಿದ್ದರು.
ಸರಿತಾ ಪ್ರಾರ್ಥಿಸಿದರು. ಸಮಿತಿಯ ಸಹ ಕಾರ್ಯದರ್ಶಿ ಸತೀಶ್ ಕುಲಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ನಿತಿನ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಮಹಾ ಅನ್ನಸಂತರ್ಪಣೆಯಲ್ಲಿ 8 ಸಾವಿರಕ್ಕೂ ಅಧಿಕ ಜನರು ಪ್ರಸಾದ ಭೋಜನ ಸೇವಿಸಿದರು.
