ಯುವಕರ ಬೌದ್ಧಿಕ, ದೈಹಿಕ ಸಾಮರ್ಥ್ಯದಿಂದ ಸದೃಢ ರಾಷ್ಟ್ರ ನಿರ್ಮಾಣ: ಯಶ್‌ಪಾಲ್ ಸುವರ್ಣ
ಯುವಕರ ಬೌದ್ಧಿಕ ಹಾಗೂ ದೈಹಿಕ ಸಾಮರ್ಥ್ಯಗಳು ಒಗ್ಗೂಡಿದಾಗ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಉಡುಪಿಯ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಲ್ಪಸಂಖ್ಯಾತ ಮೋರ್ಚಾದ ರುಡಾಲ್ಫ್, ಡೆನ್ನಿಸ್ ಸೇರಿದಂತೆ ತಂಡವು ಪರಿಶ್ರಮ ವಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ, 2014ರಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾರತವನ್ನು ಜಗತ್ತು ತಿರುಗಿ ನೋಡುವಂತೆ ಮಾಡಿದ್ದಾರೆ. ಅವರ ಚಿಂತನೆಗಳು, ಸಂಕಲ್ಪಗಳು ಹಾಗೂ ಕಾರ್ಯಕ್ಷಮತೆಗಳು ಯುವಜನತೆಗೆ ಸ್ಫೂರ್ತಿಯಾಗಿವೆ. ಪ್ರಧಾನಿ ಅವರ ಕಾರ್ಯಗಳಿಗೆ ಮತ್ತಷ್ಟು ಶಕ್ತಿ ತುಂಬುವ ಹಾಗೂ ಅವರ ವಿಚಾರಧಾರೆಗಳನ್ನು ಯುವಜನತೆಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕ್ರೀಡಾ ಚಟುವಟಿಕೆಗಳು ಸಾಮಾನ್ಯವಾಗಿ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸುವುದಾದರೆ, ಚೆಸ್ ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸುವ ಕ್ರೀಡೆಯಾಗಿದೆ. ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಜಿಲ್ಲೆಯ ಗೌರವ ಹೆಚ್ಚಿಸಲಿ ಎಂದು ಶುಭ ಹಾರೈಸಿದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಚೆಸ್ ಆಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಚಂದ್ರ ಶೆಟ್ಟಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಕೇವಲ ಚುನಾವಣೆಗೆ ಸೀಮಿತವಾಗದೆ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಚೆಸ್ ಪಂದ್ಯಾಟ ಆಯೋಜಿಸಲಾಗಿದೆ. ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಚೆಸ್ ಬೌದ್ಧಿಕ ಸಾಮರ್ಥ್ಯ ಹೆಚ್ಚುವ ಕ್ರೀಡಾ ಚಟುವಟಿಕೆಯಾಗಿದ್ದು, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜಾ, ಪ್ರಭಾಕರ್ ಪೂಜಾರಿ, ನಗರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೆನಿಸ್ ಮಸ್ಕರೇನಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ ಆಸಿಪ್, ಜಿಲ್ಲಾ ಉಪಾಧ್ಯಕ್ಷ ಮೈಕಲ್ ಡಿಸೋಜಾ, ಕಾರ್ಯದರ್ಶಿ ಅನಿತಾ ಬೆಲಿಂಡ ಡಿಸೋಜಾ, ಅನಿಲ್ ಅಂಬಲಪಾಡಿ, ಕೋಶಾಧಿಕಾರಿ ಗ್ಲೆನ್ ಮೋನಿಸ್, ಸಲೀಮ್ ಅಂಬಾಗಿಲು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನವೀನ್ ಡಿಸೊಜಾ ನಿರೂಪಿಸಿದರು.
ಚೆಸ್ ಸ್ಪರ್ಧೆಯಲ್ಲಿ ಒಟ್ಟು 163 ಸ್ಪರ್ಧಾಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ಹಾಗೂ ಕ್ರೀಡಾಸಕ್ತಿಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿತ್ತು.


