ಇಸ್ರೋ ಖಾಸಗೀಕರಣ ತಕ್ಷಣ ನಿಲ್ಲಿಸಬೇಕು: ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಖಾಸಗೀಕರಣದ ಪ್ರಯತ್ನಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.
ರಕ್ಷಣೆ, ಕೃಷಿ, ವಿಪತ್ತು ನಿರ್ವಹಣೆ, ಹವಾಮಾನ ಮುನ್ಸೂಚನೆ ಹಾಗೂ ದೂರಸಂವೇದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಸ್ರೋ ನೀಡಿರುವ ಕೊಡುಗೆಗಳು ಭಾರತದ ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಂತ ಮಹತ್ವದ್ದಾಗಿವೆ. ಇಂತಹ ನಿರ್ಣಾಯಕ ಹಾಗೂ ಸ್ವಾವಲಂಬಿ ಸಾರ್ವಜನಿಕ ಸಂಸ್ಥೆಯನ್ನು ಖಾಸಗೀಕರಣಗೊಳಿಸುವುದರಿಂದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಖಾಸಗಿ ವಲಯದ ಮೇಲೆ ಅನಗತ್ಯ ಅವಲಂಬನೆ ಉಂಟಾಗಲಿದೆ ಎಂದು ಪೊಲಿಟ್‌ಬ್ಯುರೊ ಆತಂಕ ವ್ಯಕ್ತಪಡಿಸಿದೆ.
ಇಸ್ರೋ ಇನ್ನು ಮುಂದೆ ಉಡಾವಣಾ ವಾಹನಗಳನ್ನು ತಯಾರಿಸುವುದಿಲ್ಲ ಎಂಬ IN-SPACe ಅಧ್ಯಕ್ಷ ಪವನ್ ಗೋಯೆಂಕಾ ಅವರ ಹೇಳಿಕೆ, ಭಾರತೀಯ ವಿಜ್ಞಾನಿಗಳು ಏಳು ದಶಕಗಳ ಕಾಲ ನಿರ್ಮಿಸಿರುವ ಬಾಹ್ಯಾಕಾಶ ಸಂಶೋಧನಾ ಮೂಲಸೌಕರ್ಯವನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ ಯೋಜನೆಯ ಸುಳಿವು ನೀಡುತ್ತಿದೆ ಎಂದು ಆರೋಪಿಸಿದೆ.
ಭಾರತೀಯ ಬಾಹ್ಯಾಕಾಶ ನೀತಿ-2023ರ ಭಾಗವಾಗಿ ಇಡೀ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಉದ್ಯಮಕ್ಕೆ ತೆರೆಯಲಾಗಿದ್ದು, ವಿದೇಶಿ ಹೂಡಿಕೆಗೆ ಉದಾರ ರಿಯಾಯಿತಿಗಳನ್ನು ನೀಡಲಾಗಿದೆ. ಉಡಾವಣಾ ಕಾರ್ಯಾಚರಣೆಗಳಲ್ಲಿ ವೆಚ್ಚ-ದಕ್ಷತೆ ಎಂಬ ಹೆಸರಿನಲ್ಲಿ ಈ ಕ್ರಮಗಳನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ ಎಂದು ಸಿಪಿಐ(ಎಂ) ಟೀಕಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಮಾರ್ಚ್ 2026ರಲ್ಲಿ ಮಂಡಿಸಿದ ವರದಿಯಲ್ಲೂ ಪಾರದರ್ಶಕತೆ ಮತ್ತು ಉತ್ತರದಾಯಿತ್ವವಿಲ್ಲದೆ ಸಾರ್ವಜನಿಕ ಸ್ವತ್ತುಗಳನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಲಾಗಿದೆ ಎಂದು ತಿಳಿಸಿದೆ.
ಇಸ್ರೋ ಸಿಬ್ಬಂದಿ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಇಸ್ರೋ ಮುಖ್ಯಸ್ಥರಿಗೆ ಬರೆದ ಜಂಟಿ ಪತ್ರದಲ್ಲಿ ವ್ಯಕ್ತಪಡಿಸಿರುವ ಆತಂಕಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೋ ನೀಡಿರುವ ಸ್ಪಷ್ಟೀಕರಣವು ಈ ನೀತಿಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವಾಗಿದೆ. ಆದರೆ ರಾಷ್ಟ್ರೀಯ ಭದ್ರತೆಗೆ ಉಂಟಾಗಬಹುದಾದ ಧಕ್ಕೆಯ ಕುರಿತ ಮೂಲ ಆತಂಕವನ್ನು ಪರಿಹರಿಸುವಲ್ಲಿ ಅದು ವಿಫಲವಾಗಿದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.
ದೇಶದ ಆಯಕಟ್ಟಿನ ಹಿತಾಸಕ್ತಿಗಳ ರಕ್ಷಣೆ ಹಾಗೂ ಇಸ್ರೋವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಿಬ್ಬಂದಿಯ ಪರವಾಗಿ ಸಿಪಿಐ(ಎಂ) ನಿಲ್ಲಲಿದೆ. ಇಂತಹ ಬಹುಮಹತ್ವದ ರಾಷ್ಟ್ರೀಯ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಎಲ್ಲಾ ಪ್ರಯತ್ನಗಳನ್ನು ತೀವ್ರವಾಗಿ ವಿರೋಧಿಸಲಾಗುವುದು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.