
Bangalore: ಆ.10ರಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ
09/08/2025
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ ಪ್ರಸ್ ರೈಲು ಹಾಗೂ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಆಗಸ್ಟ್ 10ರ ರವಿವಾರ ಬೆಳಗ್ಗೆ 7.50ಕ್ಕೆ ದಿಲ್ಲಿಯಿಂದ ವಿಮಾನದ ಮೂಲಕ ಹೊರಟು 10.30ಕ್ಕೆ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 10.35ಕ್ಕೆ ಎಚ್‌ಎಎಲ್ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಏರ್ ಫೋರ್ಸ್ ಕಮಾಂಡೊ ತರಬೇತಿ ಕೇಂದ್ರಕ್ಕೆ 10.55ಕ್ಕೆ ಆಗಮಿಸುವರು. ತರಬೇತಿ ಕೇಂದ್ರದಿ0ದ 11 ಗಂಟೆಗೆ ರಸ್ತೆ ಮೂಲಕ ಹೊರಟು 11.10ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ತಲುಪಲಿದ್ದಾರೆ.
ಅಲ್ಲಿ 11.15ರಿಂದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್ಪ್ರೆಸ್ ಜತೆಗೆ ಅಮೃತಸರ-ಶ್ರೀಮಾತಾ ವೈಷ್ಣೋ ದೇವಿ ಕಟ್ರಾ ಮತ್ತು ನಾಗಪುರ-ಪುಣೆ (ವರ್ಚುವೆಲ್) ರೈಲು ಸಂಚಾರ ಸೇವೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಲಿದ್ದಾರೆ. ಅನಂತರ 11.30ರಿಂದ 11.40ರ ವರೆಗೆ ರಸ್ತೆ ಮೂಲಕ ಆರ್ ವಿ ರಸ್ತೆ (ರಾಗಿಗುಡ್ಡ) ಮೆಟ್ರೋ ಸ್ಟೇಷನ್ ಆಗಮಿಸಲಿದ್ದಾರೆ.
11.45ರಿಂದ 12.50ರ ವರೆಗೆ ಮೆಟ್ರೋ ಹಳದಿ ಮಾರ್ಗದಲ್ಲಿ ಆರ್ ವಿ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ವರೆಗೆ ಪ್ರಧಾನಮಂತ್ರಿ ಅವರು ಸಂಚರಿಸಲಿದ್ದಾರೆ. ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಐಐಟಿ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬೆಂಗಳೂರು ಮೆಟ್ರೋ ಹಂತ-3ರ ಅಡಿಗಲ್ಲು ಹಾಕುವುದು ಹಾಗೂ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗಕ್ಕೆ ಚಾಲನೆ ನೀಡುವರು. ತದನಂತರ 2.40ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ದಿಲ್ಲಿಗೆ ವಾಪಸಾಗಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.