Bangalore: ಶಿಕ್ಷಣ ನೀತಿ ಅಂತಿಮ ವರದಿ ಸಲ್ಲಿಕೆ; ದ್ವಿಭಾಷಾ ನೀತಿ ಅನುಷ್ಟಾನಕ್ಕೆ ಶಿಫಾರಸ್ಸು
09/08/2025
ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ಅಂತಿಮ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದು, ಮಾತೃ ಭಾಷೆ ಕನ್ನಡ ಹಾಗೂ ಇಂಗ್ಲಿಷ್ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸುವ ಶಿಫಾರಸ್ಸಿನೊಂದಿಗೆ ಒಟ್ಟು 97 ಶಿಫಾರಸುಗಳನ್ನು ಮಾಡಿದೆ.
ಅಕ್ಟೋಬರ್ 11, 2023ರಂದು ರಾಜ್ಯ ಸರ್ಕಾರವು ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಿ ಶಿಕ್ಷಣ ನೀತಿಯನ್ನು ರೂಪಿಸಲು ನೇಮಿಸಿತು. ಪ್ರೊ. ಸುಖದೇವ್ ಥೋರಾಟ್ ಅವರ ಅಧ್ಯಕ್ಷತೆಯಲ್ಲಿ 17 ಸದಸ್ಯರು, 6 ವಿಷಯ ತಜ್ಞರು/ಸಲಹೆಗಾರರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿಯೊಂದಿಗೆ ಈ ಆಯೋಗ ಕಾರ್ಯಾರಂಭ ಮಾಡಿತು. ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿರುವ ಆಯೋಗವು ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದೆ. ವರದಿಯಲ್ಲಿ ಪ್ರಮುಖವಾಗಿ ಮಾತೃ ಭಾಷೆ ಕನ್ನಡ, ಇಂಗ್ಲಿಷ್ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸಲು ಶಿಫಾರಸು ಮಾಡಲಾಗಿದೆ.