Udupi: ಕೇಂದ್ರ ಸರಕಾರ, ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಮೊಂಬತ್ತಿ ಪ್ರತಿಭಟನೆ
14/08/2025
ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗುವ ಮೂಲಕ ಮತವಂಚನೆ ನಡೆಸಿ ಆ ಮೂಲಕ ಚುನಾವಣಾ ಅಕ್ರಮಗಳಿಗೆ ಕಾರಣವಾದ ಚುನಾವಣಾ ಆಯೋಗ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಮೊಂಬತ್ತಿ ಪ್ರತಿಭಟನೆ ನಡೆಯಿತು.
ನಕಲಿ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸುವ ಮೂಲಕ ಚುನಾವಣಾ ಆಯೋಗವು ಬಿಜೆಪಿ ಅಧಿಕಾರಕ್ಕೆ ಬರಲು ನೆರವಾಗಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ದಾಖಲೆ ಸಹಿತ ಹಗರಣ ಬಯಲಿಗೆಳೆದ ಬೆನ್ನಿಗೆ ಎಐಸಿಸಿ ಘೋಷಿಸಿದ 'ಮತಗಳ್ಳರೇ ಅಧಿಕಾರ ಬಿಡಿ' (ವೋಟ್ ಚೋರ್; ಗದ್ದೀ ಛೋಡ್) ಎಂಬ ಅಭಿಯಾನದಡಿ ದೇಶಾದ್ಯಂತ ಈ ಮೊಂಬತ್ತಿ ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ವಾಮ ಮಾರ್ಗದಲ್ಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಬಿಜೆಪಿಗೆ ಅಭ್ಯಾಸವಾಗಿಬಿಟ್ಟಿದೆ. ಇದೀಗ ರಾಹುಲ್ ಗಾಂಧಿಯವರು ಅವರ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಬಿಜೆಪಿಯ ಅಕ್ರಮವನ್ನು ಜನರಿಗೆ ತಲುಪುವುಂತೆ ಮಾಡುವುದು ಕಾಂಗ್ರೆಸ್ ಕಾರ್ಯಕರ್ತರ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅದ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಪ್ರಸಾದ್ ರಾಜ್ ಕಾಂಚನ್, ವೆರೊನಿಕಾ ಕರ್ನೇಲಿಯೊ, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.