
Bangalore: ಹೆಣ್ಮಕ್ಕಳು, ಮಹಿಳೆಯರ ರಕ್ಷಣೆಗೆ "ಅಕ್ಕಪಡೆ"; ಆ. 15ರಂದು 3 ಕಡೆ ಪ್ರಾಯೋಗಿಕವಾಗಿ ಜಾರಿ
17/08/2025
ಶಾಲಾ ಕಾಲೇಜು ವಿದ್ಯಾರ್ಥಿನಿಯರ ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಹಾಗೂ ಬಾಲ್ಯ ವಿವಾಹವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮಹಿಳಾ ಪೊಲೀಸ್ ಒಳಗೊಂಡ 'ಅಕ್ಕ ಪಡೆ' ರಚಿಸಲಾಗಿದೆ.
ಅಗಸ್ಟ್ 15 ರಿಂದ ಬೆಳಗಾವಿ, ಮೈಸೂರು ಹಾಗೂ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ 'ಅಕ್ಕ ಪಡೆ' ಕಾರ್ಯ ನಿರ್ವಹಿಸಲು ಆರಂಭಿಸಿದ್ದು, ಶೀಘ್ರದಲ್ಲೇ ರಾಜ್ಯದಾದ್ಯಂತ ವಿಸ್ತರಿಸಲಾಗುತ್ತದೆ. ಈ ಪಡೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಎನ್‌ಸಿಸಿ ಕ್ಯಾಡೆಟರುಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿದ್ದಾರೆ. ಪಡೆಗೆ ವಿಶೇಷ ವಾಹನವನ್ನು ಒದಗಿಸಲಾಗಿದ್ದು, ಶಾಲೆ-ಕಾಲೇಜುಗಳು, ಮಾರುಕಟ್ಟೆಗಳು ಹಾಗೂ ಸಾರ್ವಜನಿಕ ಸ್ಥಳಗಳ ಸುತ್ತಮುತ್ತ ಮಹಿಳೆಯರ ಸುರಕ್ಷತೆಗಾಗಿ ಗಸ್ತು ನಡೆಸಲಾಗುತ್ತದೆ.
ಅಕ್ಕ ಪಡೆ ಕಾರ್ಯದಕ್ಷತೆಯನ್ನು ಹೆಚ್ಚಿಸಲು 10 ಇಲಾಖೆಗಳ ಸಂಯುಕ್ತ ಸಮಿತಿಯನ್ನು ರಚಿಸಲಾಗಿದ್ದು, ಬಾಲ್ಯ ವಿವಾಹ ತಡೆ ಕಾಯ್ದೆ ಕರ್ನಾಟಕ ತಿದ್ದುಪಡಿ ಅಧಿನಿಯಮ 2025 ಜಾರಿಗೆ ಸಹಾಯವಾಗಲಿದೆ.
ಈ ಯೋಜನೆಯ ಮುಖ್ಯ ಗುರಿ:
* ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಸುರಕ್ಷತೆ ಒದಗಿಸುವುದು.
* ಬಾಲ್ಯ ವಿವಾಹ ಹಾಗೂ ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಪ್ರಕರಣಗಳನ್ನು ಕಡಿಮೆ ಮಾಡುವುದು.
* 2022-23ರಲ್ಲಿ 405, 2023-24ರಲ್ಲಿ 709 ಹಾಗೂ 2024-25ರಲ್ಲಿ 685 ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಪ್ರಕರಣಗಳು ದಾಖಲಾಗಿರುವುದರಿಂದ, ಇದನ್ನು ತಡೆಗಟ್ಟಲು ಸರ್ಕಾರ ತುರ್ತು ಕ್ರಮವಾಗಿ ಅಕ್ಕ ಪಡೆಯನ್ನು ಪರಿಚಯಿಸಿದೆ.