
Bangalore: ಆಗಸ್ಟ್ 5ರಂದು ರಾಹುಲ್ ಗಾಂಧಿ ಪಾದಯಾತ್ರೆ; 4 ಸಾವಿರ ಪೊಲೀಸರಿಂದ ಬಿಗಿ ಭದ್ರತೆ
04/08/2025
ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 5ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬೃಹತ್ ಧರಣಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯ0ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಮೌರ್ಯ ಸರ್ಕಲ್‌ನಿಂದ ಅರ್ಧ ಕಿಲೋ ಮೀಟರ್ ಪಾದಯಾತ್ರೆ ನಡೆಸಲು ಪ್ರತಿಭಟನಾ ನಿರತರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ 4,400 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಸಮಾವೇಶದ ಮೇಲ್ವಿಚಾರಣೆಗಾಗಿ 12 ಡಿಸಿಪಿಗಳ ನೇತೃತ್ವದಲ್ಲಿ 45 ಎಸಿಪಿ, 128 ಇನ್ಸ್ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ, 3,262 ಪುರುಷ ಪೊಲೀಸ್ ಸಿಬ್ಬಂದಿ, 591 ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಫ್ರೀಡಂ ಪಾರ್ಕ್ ಸುತ್ತ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಸಂಚಾರ ನಿರ್ವಹಣೆಗಾಗಿ ಜಂಟಿ ಆಯುಕ್ತರು, ಸಶಸ್ತ್ರ ಮೀಸಲು ಪಡೆಯ ಕೇಂದ್ರ ವಿಭಾಗ ಹಾಗೂ ಅಪರಾಧ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಸ್ಥಳಿಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಜೊತೆಗೆ 14 ಪುರುಷ ಮತ್ತು 2 ಮಹಿಳಾ ಕೆಎಸ್‌ಆರ್‌ಪಿ ತುಕಡಿಗಳು 1 ಆಂಟಿ ಸ್ಟಾಂಪೇಡ್ ಸ್ಕ್ವಾಡ್, 3 ವಾಟರ್ ಜೆಟ್, 4 ಅಗ್ನಿಶಾಮಕ ವಾಹನ, 6 ಆಂಬ್ಯುಲೆನ್ಸ್ ಸೇರಿದಂತೆ 40ಕ್ಕೂ ಹೆಚ್ಚು ವಿಶೇಷ ಪಡೆಗಳು ಸ್ಥಳದಲ್ಲಿ ಕಾರ್ಯನಿರತವಾಗಿರಲಿವೆ.