
Dharmasthala: ಸರಣಿ ಶವ ಹೂತಿರುವ ಪ್ರಕರಣ; 11ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ
04/08/2025
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 4ರಂದು ಕೂಡಾ ಎಸ್‌ಐಟಿ ತಂಡದಿಂದ ಶೋಧ ಕಾರ್ಯ ಮುಂದುವರಿದೆ.
ಬೆಳಗ್ಗೆ 11. 30ರಿಂದ ದೂರುದಾರನ ಜೊತೆ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳಕ್ಕೆ ಆಗಮಿಸಿದರು. ದೂರುದಾರ ಗುರುತಿಸಿದ 11ನೇ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಭಾನುವಾರವಾದ ಆಗಸ್ಟ್ 3ರಂದು ಯಾವುದೇ ಕಾರ್ಯಾಚರಣೆ ನಡೆದಿರಲಿಲ್ಲ. ಈವರೆಗೆ ಶೋಧ ಕಾರ್ಯ ನಡೆಸಿದ ಸ್ಥಳಗಳಲ್ಲಿ ಕೇವಲ 6ನೇ ಪಾಯಿಂಟ್‌ನಲ್ಲಿ ಮಾತ್ರ ಎಲುಬುಗಳು ಪತ್ತೆಯಾಗಿತ್ತು.
ಈಗಾಗಲೇ ಶೋಧ ನಡೆಸಿರುವ ಸ್ಥಳ ಹಾಗೂ ಇನ್ನು ಬಾಕಿ ಇರುವ 11, 12 ಮತ್ತು 13ನೇ ಸ್ಥಳಗಳಿಗೆ ಯಾರೂ ತೆರಳದಂತೆ ಭದ್ರತೆಯನ್ನು ಮಾಡಲಾಗಿದೆ. ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಕಾವಲು ಕಾಯುತ್ತಿದ್ದಾರೆ. ಧರ್ಮಸ್ಥಳ ಹಾಗೂ ಉಜಿರೆ ಮಾರ್ಗದ ಪಕ್ಕದಲ್ಲಿಯೇ ಇನ್ನು ಮುಂದಿನ 3 ಜಾಗಗಳು ಇವೆ. ದೂರುದಾರ ತೋರಿಸಿದ ಸ್ಥಳಗಳಾದ 9, 7 ಹಾಗೂ 5 ನೇ ಜಾಗಗಳಲ್ಲಿ ಬಹಳ ನಿರೀಕ್ಷೆ ಇಡಲಾಗಿತ್ತು. ಆದರೆ ಯಾವುದೇ ಕುರುಹು ಸಿಗದ ಕಾರಣ ಜಿಪಿಆರ್ ಬಳಕೆ ಮಾಡಲು ದೂರುದಾರ ಹಾಗೂ ಆತನ ಪರ ವಕೀಲರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ೧೩ನೇ ಸ್ಥಳದಲ್ಲಿ ಅನೇಕ ಶವಗಳನ್ನು ಹೂತಿರುವುದಾಗಿ ದೂರುದಾರ ಹೇಳಿಕೆ ನೀಡಿದ್ದು, ೧೩ನೇ ಸ್ಪಾಟ್ ನಲ್ಲಿ ಅವಶೇಷಗಳು ಸಿಗಬಹುದು ಎಂದು ಹೇಳಲಾಗುತ್ತಿದೆ.