.jpeg)
Bangalore: ರಸಗೊಬ್ಬರ ಕೊರತೆ ; ವಿಧಾನಸಭೆಯಲ್ಲಿ ಆಡಳಿತ- ವಿರೋಧ ಪಕ್ಷದ ನಾಯಕರ ವಾಗ್ಯುದ್ಧ
14/08/2025
ರಸಗೊಬ್ಬರಗಳ ಕೊರತೆಗೆ ಸಂಬ0ಧಿಸಿ ವಿಧಾನಸಭೆಯಲ್ಲಿ ಇಂದು ನಡೆದ ಚರ್ಚೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವಿನ ವೈಯಕ್ತಿಕ ವಾಕ್ಸಮರಕ್ಕೆ ಬಲಿಯಾಯಿತು.
ರಸಗೊಬ್ಬರ ಕೊರತೆ ಕುರಿತು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೆಲುವರಾಯ ಸ್ವಾಮಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಇನ್ನೂ 2.23 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಸಬೇಕಿದೆ ಎಂದರು. ಚೆಲುವರಾಯ ಸ್ವಾಮಿ ಹೇಳಿಕೆಗೆ ಸಮಾಧಾನಗೊಳ್ಳದ ಆರ್. ಅಶೋಕ್ ರಸಗೊಬ್ಬರ ಪೂರೈಕೆನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಈ ವೇಳೆ ಕೆಜೆ ಜಾರ್ಜ್ ಅವರ ಸ್ಮಾರ್ಟ್ ಮೀಟರ್ ಹಗರಣ ಪ್ರಸ್ತಾಪವಾಗಿ ಗದ್ದಲ ಭುಗಿಲೆದ್ದಿತು. ಬಿಜೆಪಿ ಹಿರಿಯ ನಾಯಕ ಅಶ್ವಥ್ ನಾರಾಯಣ್ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನಡುವೆ ಪರಸ್ಪರ ವಾಗ್ಯುದ್ಧಕ್ಕೆ ಇದು ಕಾರಣವಾಯಿತು. ಇಬ್ಬರೂ ಏಕವಚನದಲ್ಲೇ ಬೈದಾಡಿಕೊಂಡರು. ಹೀಗಾಗಿ ಸದಸನವನ್ನು ಐದು ನಿಮಿಷ ಮುಂದೂಡಲಾಯಿತು.
ಬಳಿಕ ಕಲಾಪ ನಡೆದಾಗ ಸಿಎಂ ಸಿದ್ಧರಾಮಯ್ಯ ಹಾಗೂ ಸ್ಪೀಕರ್ ಅವರು ಎರಡೂ ಪಕ್ಷದ ನಾಯಕರಿಗೆ ಭಾಷೆ ಬಳಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್, ಕೆಜೆ ಜಾರ್ಜ್ ಅವರು ನಮ್ಮ ನಾಯಕರು, ಅವರಿಗೆ ಅಪಮಾನವಾದರೆ ಸಹಿಸುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ನಮ್ಮ ನಾಯಕನಿಗೆ ಆಗುವ ಅಪಮಾನ ನೋಡಿಕೊಂಡು ಸುಮ್ಮನಿದ್ದರೆ ನನ್ನಂತಹ ನಾಲಾಯಕ್ ನಾಯಕ ಬೇರೊಬ್ಬನಿರುವುದಿಲ್ಲ. ನಾನು ಆಡಿರುವ ಮಾತುಗಳು ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು. ನನ್ನ ಆವೇಶ, ಭಾಷೆ ತಪ್ಪಾಗಿರಬಹುದು. ಅದನ್ನು ಸರಿ ಎಂದು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ನಾನು ಕೂಡ ಮನುಷ್ಯ. ಸಾರ್ವಜನಿಕ ಜೀವನದಲ್ಲಿ ನನಗೆ ನನ್ನದೇ ಆದ ಸಾಮರ್ಥ್ಯವಿದೆ. ನನ್ನದೇ ಆದ ಸಂಘಟನೆ ಶಕ್ತಿ, ಮಾತಿನ ಕಲೆ, ಅನುಭವ ಇದೆ. ಹಾಗೆಂದ ಮಾತ್ರಕ್ಕೆ ನಾವು ದೊಡ್ಡವರಾಗಿರಲಿ, ಚಿಕ್ಕವರಾಗಿರಲಿ ಯಾರನ್ನೂ ನೋಯಿಸಬಾರದು. ವಿರೋಧ ಪಕ್ಷದಲ್ಲಿರುವವರು ಕೂಡ ತಮ್ಮದೇ ಆದ ಅನುಭವದಲ್ಲಿ ಸಾಧನೆ ಮಾಡಿ ಇಲ್ಲಿಗೆ ಬಂದಿರುತ್ತಾರೆ. ಈ ಸದನಕ್ಕೆ ಬಂದಿರುವ ಪ್ರತಿಯೊಬ್ಬ ಸದಸ್ಯರಿಗೂ ನಾವು ಸೂಕ್ತ ಗೌರವ ನೀಡಲೇಬೇಕು” ಎಂದರು.