
Bangalore: ಮತಗಳ್ಳತನ ಆರೋಪ; ಇಂದು ರಾಹುಲ್ ಗಾಂಧಿ ಪ್ರತಿಭಟನೆ, ಹೆಚ್ಚಿನ ಪೊಲೀಸ್ ಭದ್ರತೆ
ಮತಗಳ್ಳತನದ ಆರೋಪ ಹೊರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ "ನಮ್ಮ ಮತ ನಮ್ಮ ಹಕ್ಕು, ನಮ್ಮ ಹೋರಾಟ" ಘೋಷವಾಕ್ಯದಡಿ ಧರಣಿ ನಡೆಯಲಿದೆ. ಪ್ರತಿಭಟನಾ ಸಮಾವೇಶದಲ್ಲಿ 50 ಸಾವಿರಕ್ಕೂ ಅಧಿಕ ಜನ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತೆ ಮಾಡಲಾಗಿದೆ.
ಬೆಳಗ್ಗೆ 10.30ರಿಂದ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಯಲಿದೆ. ಪ್ರತಿಭಟನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು, ಸಂಸದರು ಸೇರಿ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ರಾಜ್ಯದಲ್ಲಿನ ಮತಗಳ್ಳತನದ ಬಗ್ಗೆ ವಿವರಣೆ ನೀಡಲಿದ್ದಾರೆ. ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ನಿಯೋಗದೊಂದಿಗೆ ತೆರಳಿ ದೂರು ನೀಡಲಿದ್ದಾರೆ.
ಶಾಂತಲಾ ಜಂಕ್ಷನ್ ಮತ್ತು ಖೋಡೆ ಸರ್ಕಲ್‌ನಿಂದ, ಆನಂದರಾವ್ ಫ್ಲೈ ಓವರ್, ಹಳೆ ಜೆಡಿಎಸ್ ಕಚೇರಿ, ಶೇಷಾದ್ರಿ ರಸ್ತೆಯಿಂದ ಫ್ರೀಡಂಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗವಾಗಿ ಲುಲು ಮಾಲ್, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕಲ್, ರೇಸ್ ಕೋರ್ಸ್ ಫ್ಲೈ ಓವರ್, ರೇಸ್ ಕೋರ್ಸ್ ರಸ್ತೆ ಮಾರ್ಗವಾಗಿ ಸಂಚರಿಸಬಹುದು ಎಂದು ಪೊಲೀಸರು ತಿಳಿಸಿದ್ಧಾರೆ.
ಪೊಲೀಸ್ ಭದ್ರತೆ: ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಫ್ರೀಡಂ ಪಾರ್ಕ್ ಸುತ್ತಮುತ್ತಲೂ ಭದ್ರತೆಗಾಗಿ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಸ್ಥಳದಲ್ಲಿ ತಾತ್ಕಾಲಿಕ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಜೊತೆಗೆ ಪೊಲೀಸ್ ಸಿಬ್ಬಂದಿಯನ್ನು ತಲಾ ಓರ್ವ ಡಿಸಿಪಿ ನೇತೃತ್ವದಲ್ಲಿ 15 ಸೆಕ್ಟರ್‌ಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಭಟನಾನಿರತರ ನಡುವೆಯೂ ಸಹ 500ಕ್ಕೂ ಅಧಿಕ ಪೊಲೀಸರು ಭದ್ರತೆಗಾಗಿ ನಿಯೋಜನೆಯಾಗಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಣಿ ಕಾಲೇಜು ಜಂಕ್ಷನ್, ಶೇಷಾದ್ರಿ ರಸ್ತೆ, ಮೆಜೆಸ್ಟಿಕ್, ಉಪ್ಪಾರಪೇಟೆ, ಕಾಟನ್ ಪೇಟೆ, ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿದೆ. ಸ್ಥಳದಲ್ಲಿ ಗರುಡ ಫೋರ್ಸ್, ಡಿ ಸ್ವಾಟ್ ಸಿಬ್ಬಂದಿ, ಕ್ಯೂಆರ್‌ಟಿ, ಅಗ್ನಿಶಾಮಕ ದಳ, 15 ಬಸ್‌ಗಳು, ಆಂಬ್ಯುಲೆನ್ಸ್, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಪ್ರತಿಭಟನೆ ಸಾಗಲಿರುವ ಮಹಾರಾಣಿ ಜಂಕ್ಷನ್, ಮುಖ್ಯ ಚುನಾವಣಾಯುಕ್ತರ ಕಚೇರಿ, ಕಾವೇರಿ ಗೆಸ್ಟ್ ಹೌಸ್, ಬಿಎಂಸಿ ಹಾಸ್ಟೆಲ್, ಓಣಿ ಆಂಜನೇಯ ದೇವಾಲಯ, ಜ್ಞಾನಜ್ಯೋತಿ ಸಭಾಂಗಣ, ಪ್ಯಾಲೇಸ್ ರಸ್ತೆ ಜಂಕ್ಷನ್, ವೈ.ರಾಮಚಂದ್ರ ರಸ್ತೆ, ಕುರುಬರ ಸಂಘ ಸರ್ಕಲ್, ಸಾಗರ್ ಜಂಕ್ಷನ್, ಗಾಂಧಿನಗರ, ಪೋತೀಸ್ ಜಂಕ್ಷನ್‌ಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಹಿತಕರ ಘಟನೆಗಳು ಸಂಭವಿಸದ0ತೆ ಕಟ್ಟೆಚ್ಚರ ವಹಿಸಲಾಗಿದೆ