
Bantwala: ಪೌತಿ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ; ಉಪತಹಶೀಲ್ದಾರ್ ಸೇರಿ ಮೂವರ ಬಂಧನ
14/08/2025
ಪೌತಿ ಖಾತೆ ಮಾಡಿಕೊಡಲು 20 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬಂಟ್ವಾಳ ತಾಲೂಕು ಕಚೇರಿಯ ಉಪ ತಹಶೀಲ್ದಾರ್ ಸೇರಿ ಮೂವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಹಾಗೂ ಮಧ್ಯವರ್ತಿ ವಾಮದಪದವು ನಿವಾಸಿ ಗಣೇಶ್ ಎಂಬವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಜಿಪಮುನ್ನೂರಿನ ಪುಷ್ಪರಾಜ್ ಎಂಬವರ ದೂರಿನ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಬಿಸಿರೋಡಿನ ದೇವಸ್ಥಾನವೊಂದರ ಸಮೀಪದಲ್ಲಿ ಹಣದ ವ್ಯವಹಾರ ನಡೆಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ್ದಾರೆ.
ಸಜಿಪಮುನ್ನೂರು ನಿವಾಸಿ ಪುಷ್ಪರಾಜ್ ಅವರು, ಪೌತಿ ಖಾತೆ ವಿಚಾರಕ್ಕಾಗಿ 2021ರಲ್ಲಿ ಬಂಟ್ವಾಳ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದು ಜಿಲ್ಲಾಧಿಕಾರಿಯವ ನ್ಯಾಯಾಲಯವು ಜಮೀನು ಮಂಜೂರಾತಿ ಆದೇಶ ನೀಡಿತ್ತು. ಅಲ್ಲದೇ ಪೌತಿ ಖಾತೆ ಮಾಡಿಕೊಡಲು ತಹಶೀಲ್ದಾರ್ ಅವರಿಗೆ ಆದೇಶ ಹೊರಡಿಸಲಾಗಿತ್ತು. ಆದರೆ ತಹಶೀಲ್ದಾರ್ ಕಚೇರಿಯಲ್ಲಿ ಫೈಲನ್ನು ಬಾಕಿ ಇಟ್ಟು ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಪ್ರಥಮ ದರ್ಜೆ ಸಹಾಯಕ ಸಂತೋಷ್‌ಗೆ 1500 ಹಾಗೂ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ಅವರಿಗೆ 20 ಸಾವಿರ ನೀಡುವಂತೆ ಬೇಡಿಕೆ ಇಡಲಾಗಿತ್ತು. ಈ ಬಗ್ಗೆ ಪುಷ್ಪರಾಜ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ನಡೆಸಲಾಗುತ್ತಿದೆ.