
Manipal: ಮಾಹೆಯಲ್ಲಿ ಆಟಿದ ತುಳು ಪರ್ಬ ಆಚರಣೆ
14/08/2025
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ತುಳುನಾಡ ಸಂಸ್ಕೃತಿ ಬಿಂಬಿಸುವ 'ಆಟಿದ ತುಳು ಪರ್ಬ' ಆಚರಿಸಲಾಯಿತು. ಸಂಗೀತ, ನೃತ್ಯ, ತುಳುನಾಡ ಖಾದ್ಯಗಳ ಮೂಲಕ ಯುನಿವರ್ಸಿಟಿಯ ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ವಿದೇಶಿ ಅತಿಥಿಗಳಿಗೆ ತುಳುನಾಡ ಸಂಭ್ರಮವನ್ನು ಪರಿಚಯಿಸಲಾಯಿತು.
ತುಳು ನಲಿಕೆ, ಯಕ್ಷಗಾನ, ಪಾಡ್ದನ, ತುಳು ಫ್ಯಾಷನ್ ಶೋ, ತುಳು ಪಾಪ್ ಬ್ಯಾಂಡ್ ಇತ್ಯಾದಿ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ತುಳು ವಿದ್ವಾಂಸ ಹಾಗೂ ಕವಿ ಡಾ. ಗಣೇಶ್ ಅಮೀನ್ ಸಂಕಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತುಳುನಾಡ ಸಂಸ್ಕೃತಿಯ ಪರಿಚಯ ನೀಡಿದರು. ಮಾಹೆಯ ಸಹ ಕುಲಪತಿ ಡಾ. ಎಚ್. ಎಸ್ ಬಲ್ಲಾಳ್ ಮಾತನಾಡಿ, ತುಳನಾಡ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ತುಳು ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲಬೈಲ್, ತುಳುನಾಡ ಸಂಸ್ಕೃತಿಯ ವಿವಿಧತೆ ಹಾಗೂ ಏಕತೆಯ ಪ್ರತೀಕವಾಗಿ ಆಟಿದ ತುಳು ಪರ್ಬ ಮೂಡಿಬಂದಿದೆ ಎಂದರು.
ಮಾಹೆಯ ಉಪ ಕುಲಪತಿ ಡಾ. ಎಂ.ಡಿ. ವೆಂಕಟೇಶ್, ಸಹ ಉಪ ಕುಲಪತಿ ಡಾ. ಶರತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.