
Bangalore: ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ: ಡಿ.ಕೆ. ಶಿವಕುಮಾರ್
ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ, ಅವರ ಪರಂಪರೆ, ದೇವಸ್ಥಾನ, ಧರ್ಮ, ಧಾರ್ಮಿಕ ಸೇವೆ ಬಗ್ಗೆ ಬಿಜೆಪಿಗಿಂತ ಹೆಚ್ಚು ಕಾಳಜಿ, ನಂಬಿಕೆ ನಮಗಿದೆ. ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆಯ ಕಲಾಪದಲ್ಲಿ ಹಾಗೂ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
“ಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಇದನ್ನು ಯಾರು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಧರ್ಮಸ್ಥಳದ ಆಡಳಿತ ಮಂಡಳಿ ಮೇಲೆ ಕಪ್ಪು ಚುಕ್ಕೆ ತರಲು ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗಿದೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
“ನಾನು ಧರ್ಮಸ್ಥಳ ಕ್ಷೇತ್ರ ಹಾಗೂ ಆ ದೇವಸ್ಥಾನದ ಮೇಲೆ ನಂಬಿಕೆ ಇರುವವನು. ನನಗೆ ಧರ್ಮಾಧಿಕಾರಿಗಳ ಮೇಲೂ ನಂಬಿಕೆ ಇದೆ. ಅವರ ಆಚಾರ ವಿಚಾರಗಳ ಬಗ್ಗೆ ಅರಿವಿದೆ. ಈ ಪ್ರಕರಣದಲ್ಲಿ ಪರಿಸ್ಥಿತಿ ಏನಿದೆ ಎಂದು ಗೃಹ ಸಚಿವರು ವಿವರಣೆ ನೀಡುತ್ತಾರೆ. ನಮಗೆ ಈ ಪ್ರಕರಣದ ವಿಚಾರ ಗೊತ್ತಿದೆ. ಈ ವಿಚಾರವಾಗಿ ಇಲ್ಲಿ ನಾವು ನಾಲ್ಕು ಜನ ಮಾತನಾಡುವುದಷ್ಟೇ ಅಲ್ಲ. ಲಕ್ಷಾಂತರ ಭಕ್ತಾದಿಗಳು ಈ ಕ್ಷೇತ್ರ ನಂಬಿದ್ದಾರೆ. ದೇಶದಲ್ಲಿ ಅನ್ನ ದಾಸೋಹ ಆರಂಭವಾಗದೇ ಇದ್ದ ಕಾಲದಲ್ಲೇ ಈ ಕ್ಷೇತ್ರದಲ್ಲಿ ಇದನ್ನು ಆರಂಭಿಸಲಾಗಿತ್ತು. ಈ ವಿಚಾರವನ್ನು ನೀವು ರಾಜಕೀಯವಾಗಿ ತಿರುಗಿಸಬೇಡಿ” ಎಂದು ಹೇಳಿದರು.
“ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಹೈಕಮಾಂಡ್ ಎಂದು ಎಳೆದು ತರಬೇಡಿ. ಈ ಪ್ರಕರಣದಲ್ಲಿ ಕಾಂಗ್ರೆಸ್ ಯಾಕೆ ಹಸ್ತಕ್ಷೇಪ ಮಾಡುತ್ತದೆ. ಅಲ್ಲಿನ ಆಂತರಿಕ ಸಮಸ್ಯೆಯಿಂದ ಯಾವನೋ ಒಬ್ಬ ಬಂದು ಆರೋಪ ಮಾಡಿದ್ದಾನೆ. ನಿಮಗಿಂತ ಹೆಚ್ಚಾಗಿ ನಮ್ಮ ಪಕ್ಷದಲ್ಲೇ ಶಿವಲಿಂಗೇಗೌಡರು, ಅಶೋಕ್ ರೈ ಸೇರಿದಂತೆ ಅನೇಕ ಶಾಸಕರು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಧ್ವನಿ ಎತ್ತಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ನಂಬಿಕೆ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ ನಾಶವಾಗಬಾರದು. ಧರ್ಮಾಧಿಕಾರಿಗಳು ಮೊದಲಿನಿಂದಲೂ ಸಾಮಾಜಿಕ ಸೇವೆ, ಧಾರ್ಮಿಕ ಸೇವೆ ಮಾಡಿಕೊಂಡು ಬರುತ್ತಿದ್ದು, ಅವರ ಮೇಲೆ ನಮಗೆ ಯಾವುದೇ ಅನುಮಾನವಿಲ್ಲ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅವರ ಧಾರ್ಮಿಕ ಕೆಲಸಗಳ ಬೆನ್ನಿಗೆ ನಿಲ್ಲಲು ಬದ್ಧವಾಗಿದೆ. ಕೆಲವರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೃಹ ಸಚಿವರಾಗಲಿ, ಸರ್ಕಾರವಾಗಲಿ ಸುಮ್ಮನೆ ಕೂರಲು ಸಾಧ್ಯವೇ? ಇದೆಲ್ಲವನ್ನು ಗೃಹ ಸಚಿವರು ವಿವರಿಸುತ್ತಾರೆ. ಧರ್ಮಸ್ಥಳದ ವಿರೇಂದ್ರ ಹೆಗಡೆ, ಅವರ ಪರಂಪರೆ, ದೇವಸ್ಥಾನ, ಧರ್ಮ, ಧಾರ್ಮಿಕ ವಿಚಾರದ ಬಗ್ಗೆ ನಮಗೆ ನಿಮಗಿಂತಲೂ ಹೆಚ್ಚು ಕಾಳಜಿ ನಮಗಿದೆ” ಎಂದು ತಿಳಿಸಿದರು.
ನಂತರ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ “ನೂರಾರು ವರ್ಷದಿಂದ ಬಂದ ಪರಂಪರೆ ನಾಶ ಮಾಡಲು ಹೊರಟಿದ್ದಾರೆ. ಯಾರನ್ನೇ ಆಗಲಿ ಅನಗತ್ಯವಾಗಿ ತೇಜೋವಧೆ ಮಾಡುವುದು ಸರಿಯಲ್ಲ. ನಮಗೆ ನಮ್ಮದೇ ಆದ ನಂಬಿಕೆ ಇದೆ. ನಾವು ಸರ್ಕಾರದ ವತಿಯಿಂದ ಧಾರ್ಮಿಕ ದತ್ತಿ ಇಲಾಖೆ ನಡೆಸುತ್ತಿದ್ದೇವೆ. ಅವನ್ಯಾರೋ ಮುಸುಕುಧಾರಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಪರಿಣಾಮ ಇದೆಲ್ಲ ಆಗಿದೆ” ಎಂದು ತಿಳಿಸಿದರು.
“ನಮ್ಮ ಶಾಸಕಾಂಗ ಸಭೆಯಲ್ಲಿ ನಮ್ಮ ನಾಯಕರಾದ ಶಿವಲಿಂಗೇಗೌಡರು, ಬೇಳೂರು ಗೋಪಾಲಕೃಷ್ಣ, ಅಶೋಕ್ ರೈ ಸೇರಿ ಎಲ್ಲವೂ ಈ ವಿಚಾರವಾಗಿ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅಪಪ್ರಚಾರ ಮಾಡಿ ದಾರಿ ತಪ್ಪಿಸುತ್ತಿದ್ದಾರೋ ಅವರ ವಿರುದ್ಧ ತನಿಖೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ. ಮುಖ್ಯಮಂತ್ರಿಗಳು ಕೂಡ ಇಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಗೃಹ ಸಚಿವರು ಸದನದಲ್ಲಿ ವಿವರ ನೀಡುತ್ತಾರೆ” ಎಂದರು.
“ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಇದನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಬೇಕು ಎಂದು ಎಸ್ಐಟಿ ರಚಿಸಿ ತನಿಖೆ ಮಾಡಲಾಗುತ್ತಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರದೇ ಆದ ವ್ಯಾಖ್ಯಾನ ಮಾಡಿದ್ದಾರೆ. ಈ ವಿಚಾರದಲ್ಲಿ ಧರ್ಮಾಧಿಕಾರಿಗಳಿಗೆ ಅನ್ಯಾಯ ಆಗಿದೆ” ಎಂದು ಹೇಳಿದರು.
ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯಲು ಪ್ರಯತ್ನಿಲಾಗುತ್ತಿದೆ ಎಂದು ಬಿಜೆಪಿಯವರು ಕಾಂಗ್ರೆಸ್ ಮೇಲೆ ಆರೋಪ ಮಾಡಿರುವ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಯಾವುದೇ ಸಂದರ್ಭದಲ್ಲಿ ಧರ್ಮಸ್ಥಳ ಅಥವಾ ಇತರೆ ಧಾರ್ಮಿಕ ಕ್ಷೇತ್ರಗಳ ಗೌರವ, ಸ್ವಾಭಿಮಾನ, ನಂಬಿಕೆಗೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ. ನ್ಯಾಯ, ಧರ್ಮದ ವಿಚಾರದಲ್ಲಿ ನಾವು ಎಲ್ಲರನ್ನು ಸರಿಸಮನಾಗಿ ನೋಡುತ್ತೇವೆ” ಎಂದು ತಿಳಿಸಿದರು.