
Udupi: ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 505ನೇ ಅನಾಥ ಶವ ಸಂಸ್ಕಾರ
18/08/2025
ಉಡುಪಿ ಜಿಲ್ಲಾ ನಾಗರೀಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ವಾರಸುದಾರರಿಲ್ಲದ 505ನೇ ಶವದ ಅಂತ್ಯಸಂಸ್ಕಾರವನ್ನು ಗೌರಯುತವಾಗಿ ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ನಡೆಸಲಾಯಿತು. ನಿತ್ಯಾನಂದ ಒಳಕಾಡು ಅವರು ಕಳೆದ 14 ವರ್ಷಗಳಿಂದ ಅನಾಥ ಶವಗಳ ಅಂತ್ಯಸ0ಸ್ಕಾರವನ್ನು ಗೌರಯುತವಾಗಿ ನಡೆಸುತ್ತಿದ್ದು, ಇದು 505 ನೇ ಅನಾಥ ಶವದ ಅಂತ್ಯಸಂಸ್ಕಾರವಾಗಿತ್ತು.
ಬೀಡಿನಗುಡ್ಡೆಯ ಸರ್ಕಲ್ ಬಳಿಯಿಂದ ಅನಾಥ ಶವದ ಶವಯಾತ್ರೆಯನ್ನು ರುದ್ರಭೂಮಿಯವರೆಗೆ ಹೊತ್ತು ಸಾಗಿಸಲಾಗಿತ್ತು. ಹಿರಿಯ ನ್ಯಾಯಧೀಶ ಹಾಗೂ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ. ಆರ್. ಮತ್ತು ಉಡುಪಿ ನಗರ ಪೋಲಿಸ್ ಠಾಣೆಯ ಪಿಎಸ್‌ಐ ಭರತೇಶ್ ಅವರು ಶವದ ಚಟ್ಟಕ್ಕೆ ಹೆಗಲು ನೀಡಿ, ಬಂಧುತ್ವದ ಸಂದೇಶ ಸಾರಿದರು. ಶವಯಾತ್ರೆಯಲ್ಲಿ ನಿತ್ಯಾನಂದ ಒಳಕಾಡು ಅವರು ತಮಟೆ ಬಾರಿಸಿ ಅಂತಿಮ ಗೌರವ ಸಮರ್ಪಿಸಿದರು.
ಉಡುಪಿ ಜಿಲ್ಲಾಸ್ಪರ್ತೆಯ ಸರ್ಜನ್ ನಿತ್ಯಾನಂದ ನಾಯ್ಕ್, ವೈದ್ಯಾಧಿಕಾರಿ ಡಾ ವಾಸುದೇವ್, ವಿಧಿ ವಿಜ್ಞಾನ ತಜ್ಞ ಡಾ. ರಮೇಶ್ ಕುಂದರ್, ನಗರ ಸಭೆ ಆರೋಗ್ಯ ನಿರೀಕ್ಷಕ ಸತೀಶ್ ಮೃತ ವ್ಯಕ್ತಿಗೆ ಹೂಹಾರ ಹಾಕಿ ಅಂತಿಮ ಗೌರವ ಸಮರ್ಪಿಸಿದರು. ನಗರ ಪೋಲಿಸ್ ಠಾಣೆಯ ಪಿ ಎಸ್ ಐ ಭರತೇಶ್, ತನಿಖಾ ಸಹಾಯಕ ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ವಿಕಾಸ್ ಶೆಟ್ಟಿ, ಪ್ಲವರ್ ವಿಷ್ಣು, ಸತೀಶ್ ಕುಮಾರ್, ನೀತು ನಿಟ್ಟೂರು, ಪ್ರದೀಪ್ ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು.
ಕುಸಿದು ಬಿದ್ದು ಸಾವನಪ್ಪಿದ, ಸುಮಾರು ಅರವತ್ತು ವರ್ಷ ಪ್ರಾಯದ, ಅಪರಿಚಿತ ಗಂಡಸಿನ ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಮೃತನ ವಾರಸುದಾರರ ಪತ್ತೆಗೊಳಿಸಲು ಮಾಧ್ಯಮಗಳಲ್ಲಿ ಪ್ರಕಟಣೆ ಪ್ರಕಟಿಸಲಾಗಿತ್ತು. ನಗರ ಪೋಲಿಸ್ ಠಾಣೆಯ ಪೋಲಿಸರು ಮೃತನ ಸಂಬಂಧಿಕರನ್ನು ಹುಡುಕಾಟ ನಡೆಸಿದ್ದರು. ಮೃತ ವ್ಯಕ್ತಿಯು ಜಯ ಪೂಜಾರಿ ಹೆಸರಿನಿಂದ ಕರೆಯಲ್ಪಡುತ್ತಿದ್ದ ಎನ್ನುವ ವಿಚಾರ ಬಿಟ್ಟರೆ, ಬೇರಾವ ಮಾಹಿತಿ ಮೃತ ವ್ಯಕ್ತಿಯ ಬಗ್ಗೆ ಇರಲಿಲ್ಲ. ವ್ಯಕ್ತಿ ಮೃತಪಟ್ಟು 45 ದಿನಗಳು ಕಳೆದರೂ ಸಂಬಂಧಿಕರು ಸಂಪರ್ಕರ್ಕಿಸದೆ ಇರುವುದರಿಂದ ಕಾನೂನು ಪ್ರಕ್ರಿಯೆಗಳು ನಡೆದಾದ ಬಳಿಕ, ದಫನರೂಪದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.