ಶೀರೂರು ಪರ್ಯಾಯ; ನಗರದೆಲ್ಲೆಡೆ 1500ಕ್ಕೂ ಅಧಿಕ ಪೊಲೀಸರ ಕಣ್ಗಾವಲು
ಜ. 17 ಮತ್ತು ಜ. 18ರಂದು ನಡೆಯುವ ಉಡುಪಿಯ ಶೀರೂರು ಪರ್ಯಾಯ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಪರ್ಯಾಯ ಸಂದರ್ಭದಲ್ಲಿ ಕೃಷ್ಣಮಠ ಹಾಗೂ ಉಡುಪಿ ನಗರದ ವಿವಿಧೆಡೆ ನಡೆಯುವ ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನೆರವೇರಿಸುವ ನಿಟ್ಟಿನಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಜಿಲ್ಲೆಯ ಸೂಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತೆಗಾಗಿ ಉಡುಪಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಒಟ್ಟು ಒಬ್ಬರು ಎಸ್‌ಪಿ, ಒಬ್ಬರು ಹೆಚ್ಚುವರಿ ಎಸ್‌ಪಿ, 8 ಮಂದಿ ಡಿವೈಎಸ್‌ಪಿಗಳು, 21 ಮಂದಿ ಪೊಲೀಸ್ ಇನ್ಸ್ಪೆಕ್ಟರ್ ಗಳು, 61 ಮಂದಿ ಪೊಲೀಸ್ ಉಪನಿರೀಕ್ಷಕರು, 110 ಮಂದಿ ಸಹಾಯಕ ಪೊಲೀಸ್ ಉಪನಿರೀಕ್ಷಕರನ್ನು ಭದ್ರತೆಗಾಗಿ ನೇಮಿಸಲಾಗಿದೆ. 812 ಪೊಲೀಸ್ ಸಿಬ್ಬಂದಿಗಳು ಹಾಗೂ 200 ಗೃಹರಕ್ಷಕ ಸಿಬ್ಬಂದಿಗಳನ್ನು ಬಂದೊಬಸ್ತ್ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ. ಅಲ್ಲದೇ 4 ಕೆಎಸ್‌ಆರ್‌ಪಿ ತುಕುಡಿ, 14 ಡಿಎಆರ್, 5 ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ ಪಿ ಹೇಳಿದ್ದಾರೆ.
ಶ್ರೀ ಕೃಷ್ಣ ಮಠದ ಸುತ್ತಮುತ್ತ ಕಣ್ಗಾವಲಿಗಾಗಿ 70 ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಬಳಿ ಹೊರಠಾಣೆಗಳನ್ನು ತೆರಯಲಾಗಿದೆ.
ಒಂದು ಕ್ಯೂ.ಆರ್.ಟಿ ತಂಡ, 6 ಆಂಬ್ಯುಲೆನ್ಸ್, 6 ಅಗ್ನಿಶಾಮಕ, 5 ಅಗ್ನಿ ಬುಲೆಟ್, 24 ಪಬ್ಲಿಕ್ ಅಡ್ರೆಸ್ ಸಿಸ್ಟಂ, 6 ಪೊಲೀಸ್ ಸಹಾಯವಾಣಿ, 12 ಬೈನಾಕುಲರ್,3 ಡ್ರೋನ್ ಕ್ಯಾಮೆರಾ, 300 ಬ್ಯಾರಿಕೇಡ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.