ಶೀರೂರು ಪರ್ಯಾಯ ದೀಪಾಲಂಕಾರ ಉದ್ಘಾಟನೆ; ಪರಶುರಾಮ ಸ್ವಾಗತ ಗೋಪುರಕ್ಕೆ ಶಿಲಾನ್ಯಾಸ
ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಚೊಚ್ಚಲ ಪರ್ಯಾಯ ಮಹೋತ್ಸವದ ಅಂಗವಾಗಿ ಉಡುಪಿ ನಗರಸಭೆ ವತಿಯಿಂದ ಶಾಸಕ ಯಶಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಉಡುಪಿ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸುವ ಯೋಜನೆಗೆ ಜ.16ರಂದು ಚಾಲನೆ ಸಿಗಲಿದೆ.
ಇದೇ ಮೊದಲ ಬಾರಿಗೆ ಸುಮಾರು 50 ಲಕ್ಷ ರೂ.ಗಳ ವೆಚ್ಚದಲ್ಲಿ ಉಡುಪಿ ನಗರದ ಶ್ರೀಕೃಷ್ಣ ಮಠದ ಆಸುಪಾಸಿನ ಇಡೀ ಪ್ರದೇಶವನ್ನು ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕಾರಗೊಳಿಸಲಾಗುತ್ತಿದೆ. ಈ ಯೋಜನೆಗೆ ಶುಕ್ರವಾರ ಸಂಜೆ 7ಗಂಟೆಗೆ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯ ಎದುರು ಚಾಲನೆ ನೀಡಲಾಗುವುದು ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಯಶಪಾಲ್ ಸುವರ್ಣ ತಿಳಿಸಿದ್ದಾರೆ.
ಶೀರೂರು ಮಠದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಉಡುಪಿ ನಗರಸಭೆ ಅನುಷ್ಠಾನಗೊಳಿಸಿದ ಈ ಯೋಜನೆಗೆ ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದ್ದು ನಗರ ದೀಪಾಲಂಕಾರವನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಉದ್ಘಾಟನೆಯನ್ನು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ನೆರವೇರಿಸಲಿದ್ದಾರೆ.
ಪರಶುರಾಮ ಸ್ವಾಗತ ಗೋಪುರಕ್ಕೆ ಶೀಲನ್ಯಾಸ: ಉಡುಪಿಯ ದಕ್ಷಿಣ ಭಾಗದಲ್ಲಿ ಈಗಾಗಲೇ ಪುತ್ತಿಗೆ ಮಠದ ವತಿಯಿಂದ ಭವ್ಯವಾದ ಗೀತಾಚಾರ್ಯರ ಸ್ವಾಗತಗೋಪುರ ನಿರ್ಮಿಸಿದ್ದು ಇದೀಗ ಉಡುಪಿ ನಗರವನ್ನು ಪ್ರವೇಶಿ ಸುವ ಉತ್ತರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ನಲ್ಲಿ ಪರಶುರಾಮ ಸ್ವಾಗತ ಗೋಪುರ ನಿರ್ಮಾಣಕ್ಕೆ ಜ.16ರಂದು ಬೆಳಗ್ಗೆ 9ಗಂಟೆಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಅವರು ಹೇಳಿದರು. ಸುಮಾರು ಒಂದು ಕೋಟಿ ರೂ.ವೆಚ್ಚದ ಈ ಭವ್ಯ ಸ್ವಾಗತ ಗೋಪುರವನ್ನು ಅಂಬಾಗಿಲು ಜಂಕ್ಷನ್ ಬಳಿ ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ನಿರ್ಮಿಸಲಾಗುತ್ತದೆ.
ಅನ್ನಸಂತರ್ಪಣೆ: ಪರ್ಯಾಯ ಮುನ್ನಾದಿನ ಜ.17ರ ಶನಿವಾರ ಉಡುಪಿಯ ವಿವಿಧ ಭಾಗಗಳಲ್ಲಿ ಅಂದರೆ ರಾಜಾಂಗಣದ ಪಾರ್ಕಿಂಗ್ ಪ್ರದೇಶ, ನಿತ್ಯಾನಂದ ಮಂದಿರ, ಬಸ್ಸುನಿಲ್ದಾಣ ಸಮೀಪದ ಬೋರ್ಡ್ ಶಾಲೆ - ಮೂರೂ ಕಡೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ಗೋವಿಂದ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಲಾತಂಡದವರಿಗೆ ಸಂಜೆ 7 ಗಂಟೆಯಿAದ 12 ಗಂಟೆವರೆಗೆ ಅನ್ನಸಂಪರ್ಪಣೆ ನಡೆಯಲಿದೆ. ಸುಮಾರು ಒಂದು ಲಕ್ಷದಷ್ಟು ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜನವರಿ 17ರಿಂದ 22ರವರೆಗೆ ಪ್ರತಿದಿನ ವಿಶೇಷ ಅನ್ನಸಂತರ್ಪಣೆ ನಡೆಯಲಿದ್ದು ನಾಲ್ಕರಿಂದ ಐದು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಶಾಸಕರು ತಿಳಿಸಿದರು.
ಈ ಬಾರಿಯ ಪರ್ಯಾಯ ಶನಿವಾರ ಮತ್ತು ಭಾನುವಾರ ಬಂದಿರುವುದರಿOದ ಸುಮಾರು ಎರಡರಿಂದ ಮೂರು ಲಕ್ಷ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪರ್ಯಾಯ ಮೆರವಣಿಗೆ ಅತ್ಯಂತ ವಿಜೃಂಭಣೆಯಿOದ ಅದ್ದೂರಿಯಾಗಿ ವಿಶಿಷ್ಟವಾಗಿ ನಡೆಯಲಿದೆ ಎಂದವರು ತಿಳಿಸಿದರು. ಇದರಲ್ಲಿ ದೇಶಾದ್ಯಂತದಿOದ ಬಂದ ಸಾಂಸ್ಕೃತಿಕ ತಂಡಗಳೊOದಿಗೆ ಸ್ಥಳೀಯ ಕಲಾತಂಡಗಳು, ಭಜನಾ ತಂಡಗಳು, ತಾಲೀಮು ತಂಡಗಳು ಶೋಭಾ ಯಾತ್ರೆಯಲ್ಲಿ ಭಾಗವಹಿಸಲಿವೆ.
ಶೋಭಾ ಯಾತ್ರೆ ಜ.18ರ ರವಿವಾರ ಬೆಳಿಗ್ಗೆ ಎರಡು ಗಂಟೆಗೆ ಆರಂಭ ವಾಗಲಿದ್ದು ಸುಮಾರು ಎರಡು ಗಂಟೆಗಳ ಕಾಲ ನಡೆಯಲಿದೆ. ಬಳಿಕ ಅಲಂಕೃತ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಮುಂಜಾನೆ 5:30ರಿಂದ ಸುಮಾರು ಮೂರು ಗಂಟೆಗಳ ಕಾಲ ನಡೆಯಲಿದೆ.ಇದರಲ್ಲಿ ಪರ್ಯಾಯ ದೀಕ್ಷೆ ತೆಗೆದುಕೊಂಡಿರುವ ಶ್ರೀವೇದವರ್ಧನ ತೀರ್ಥರು ಇತರ ಸ್ವಾಮೀಜಿಯವರೊಂದಿಗೆ, ನಾಡಿನ ಗಣ್ಯರು, ಉದ್ಯಮಿಗಳನ್ನು ಶ್ರೀಕೃಷ್ಣ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಪರ್ಯಾಯ ದರ್ಬಾರ್‌ನಲ್ಲಿ ಕೇಂದ್ರ ಮತ್ತು ರಾಜ್ಯದ ಸಚಿವರು, ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ಮೋಹನ್ ಭಟ್, ಮಧುಕರ ಮುದ್ರಾಡಿ, ಸಂತೋಷ್ ಸುವರ್ಣ ಬೆಳ್ಳೆ ಉಪಸ್ಥಿತರಿದ್ದರು.

