ಅಪಘಾತದ ಗಾಯಾಳು ಮಗುವನ್ನು ಆಸ್ಪತ್ರೆ ಸೇರಿಸಿ ಮಾನವೀಯತೆ ಮೆರೆದ ಪೊಲೀಸರು
Thursday, January 08, 2026
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಪೊಲೀಸ್ ಇಲಾಖೆಯ ವಾಹನದಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಕುಂದಾಪುರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಹೆಮ್ಮಾಡಿಯಿಂದ ಕೊಲ್ಲೂರು ಕಡೆ ಹೋಗುತ್ತಿದ್ದ ಕಾರು ಹಾಗೂ ನೆಂಪು ಕಡೆಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ದಂಪತಿ ಹಾಗೂ ಪುಟ್ಟ ಮಗುವಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಈ ವೇಳೆ ಅನತಿ ದೂರದಲ್ಲಿ ಗಸ್ತಿನಲ್ಲಿದ್ದ ಹೈವೇ ಪಟ್ರೋಲ್ ವಾಹನ ಸ್ಥಳಕ್ಕೆ ಆಗಮಿಸಿತು. ಬೈಕಿನಿಂದ ಬಿದ್ದವರನ್ನು ಪ್ರಾಥಮಿಕವಾಗಿ ಉಪಚರಿಸಿ ಗಂಭೀರ ಗಾಯಗೊಂಡಿದ್ದ 3 ವರ್ಷದ ಹೆಣ್ಣು ಮಗುವನ್ನು ವಾಹನದ ಚಾಲಕ ರಾಮ ಹಾಗೂ ಸಿಬ್ಬಂದಿ ಕಿರಣ್ ಬಿ. ಪಾಟೀಲ್, ತಮ್ಮ ಇಲಾಖಾ ವಾಹನದಲ್ಲಿ ಕೂಡಲೇ ಕುಂದಾಪುರ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ದಂಪತಿಯನ್ನು ಸ್ಥಳೀಯ ವಾಹನದವರು ಆಸ್ಪತ್ರೆಗೆ ಕರೆದೊಯ್ದು ಮೂವರಿಗೆ ಕುಂದಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಅವರು ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.