-->
 ಶ್ರೀಕೃಷ್ಣಮಠದಲ್ಲಿ ಸಂಭ್ರಮದ ಮೂರುತೇರು ಉತ್ಸವ

ಶ್ರೀಕೃಷ್ಣಮಠದಲ್ಲಿ ಸಂಭ್ರಮದ ಮೂರುತೇರು ಉತ್ಸವ


ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಮಕರಸಂಕ್ರಾಂತಿ ಪ್ರಯುಕ್ತ ಬುಧವಾರ ಸಂಜೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ಬ್ರಹ್ಮರಥ ಸಹಿತ ಮೂರುತೇರು ಉತ್ಸವ ಭಕ್ತಿಭಾವದಿಂದ ನಡೆಯಿತು.


ಆಚಾರ್ಯ ಮಧ್ವರು ಮಕರ ಸಂಕ್ರಾಂತಿಯಂದು ಶ್ರೀಕೃಷ್ಣನ ಪ್ರತಿಷ್ಠಾಪನೆ ನಡೆಸಿದ ಐತಿಹ್ಯದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮಹಾಭಿಷೇಕ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಏಕಾದಶಿ ಹಿನ್ನೆಲೆ ಪ್ರಸಾದ ಭೋಜನ ವ್ಯವಸ್ಥೆ ಇರಲಿಲ್ಲ.

ಸಂಜೆ ಪರ್ಯಾಯ ಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಅವರು ಭಾಗವಹಿಸಿದರು. ಭಾವಿ ಪರ್ಯಾಯ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕೂಡ ಮುಹೂರ್ತ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಖಜಕಿಸ್ತಾನ ಸೇರಿದಂತೆ ಹಲವು ಇಸ್ಲಾಂ ರಾಷ್ಟ್ರಗಳಲ್ಲಿ ಕೃಷ್ಣಭಕ್ತಿ ಪ್ರಚಾರ ಮಾಡುತ್ತಿರುವ, 1971ರಲ್ಲಿ ಇಸ್ಕಾನ್ ಸಂಸ್ಥಾಪಕ ಪ್ರಭುಪಾದರಿಂದ ಪ್ರಭಾವಿತರಾದ ಭಕ್ತಿಭೃಂಗ ಶ್ರೀಗೋವಿಂದ ಸ್ವಾಮಿ ಮಹಾರಾಜರು ವಿದೇಶದಿಂದ ಉಡುಪಿಗೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. 

ಜ.15ರಂದು ಬೆಳಿಗ್ಗೆ 9ರಿಂದ ರಥಬೀದಿಯಲ್ಲಿ ಚೂರ್ಣೋತ್ಸವ ನಡೆಯಲಿದ್ದು, ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಆರಂಭವಾಗಲಿದೆ. 

ಮಕರಸಂಕ್ರಾಂತಿಯಂದು ಪರ್ಯಾಯ ಪುತ್ತಿಗೆ ಶ್ರೀಪಾದದ್ವಯರು ಏಕಾದಶಿ ನಿರ್ಜಲ ಉಪವಾಸದಲ್ಲಿದ್ದು, ಮಾರನೇ ದಿನ ದ್ವಾದಶಿಯಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚೂರ್ಣೋತ್ಸವ ಆರಂಭವಾಗಲಿದೆ ಎಂದು ಶ್ರೀಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.






Ads on article

Advertise in articles 1

advertising articles 2

Advertise under the article