-->
ಉಡುಪಿಯ ರಜತಪೀಠ ಮೆಡಿಕಲ್ ನಲ್ಲಿ ಜನ್ ಮನ್ ಜನರಿಕ್ ಔಷಧಿ ಪ್ರಾಂಚೈಸಿ ಶುಭಾರಂಭ

ಉಡುಪಿಯ ರಜತಪೀಠ ಮೆಡಿಕಲ್ ನಲ್ಲಿ ಜನ್ ಮನ್ ಜನರಿಕ್ ಔಷಧಿ ಪ್ರಾಂಚೈಸಿ ಶುಭಾರಂಭ



ಉಡುಪಿಯ ಶ್ರೀಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿರುವ ಶ್ರೀರಾಮಧಾಮ ಕಟ್ಟಡದ ರಜತಪೀಠ ಮೆಡಿಕಲ್ ನಲ್ಲಿ ಜನ್ ಮನ್ ಜನರಿಕ್ ಔಷಧದ ನೂತನ ಪ್ರಾಂಚೈಸಿ ಇಂದು ಶುಭಾರಂಭಗೊಂಡಿತು.


ಉಡುಪಿ ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥಶ್ರೀಪಾದರು, ನೂತನ ಪ್ರಾಂಚೈಸಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಶ್ರೀಗಳು,  ಜನರಿಗೆ ಅನಾರೋಗ್ಯ ಬರುವುದು ಸಾಮಾನ್ಯ. ಜನರಿಗೆ ಅತೀ ಕಡಿಮೆ ದರದಲ್ಲಿ ಔಷಧಿ ನೀಡಲು ಪ್ರಧಾನಿ ಜನ ಔಷಧಿ ಕೇಂದ್ರಗಳನ್ನು ತೆರೆದಿದ್ದಾರೆ. ಶ್ರೀಕೃಷ್ಣಮಠದ  ಪರಿಸರದಲ್ಲಿ ಸುಲಭ ದರದಲ್ಲಿ ಔಷಧಿ ಸಿಗುವ ಔಷಧಾಲಯ ಆಗಿರುವುದು ಸಂತಸ ತಂದಿದೆ.  ಔಷಧಾಲಯವನ್ನು ಕೇವಲ ವ್ಯಾಪಾರ ದೃಷ್ಟಿಯಿಂದ ನಡೆಸದೇ, ಸೇವಾ ಮನೋಭಾವದಿಂದ ನಡೆಸಬೇಕು. ಅನ್ನ ಮತ್ತು ನೀರು ವ್ಯಾಪಾರವಾಗಬಾರದು ಎಂದು ಶಾಸ್ತ್ರದಲ್ಲೇ ಹೇಳಲಾಗಿದೆ. ಅದೇ ರೀತಿ ಜೀವಕ್ಕೆ ಅತ್ಯವಶ್ಯಕವಾದ ಔಷಧಿಯೂ ವ್ಯಾಪಾರದ ವಸ್ತುವಾಗಬಾರದು ಎಂದರು. 


ಈ ಸಂದರ್ಭದಲ್ಲಿ ಮಾತನಾಡಿದ ದಿವಾನ ಉದಯಕುಮಾರ್ ಸರಳತ್ತಾಯ, “ಅಧಿಕ ಮಾಸದಲ್ಲಿ ದಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ರೋಗಿಗಳಿಗೆ ಔಷಧಿ ನೀಡುವುದು ಪುಣ್ಯದ ಕಾರ್ಯ. ಕಡಿಮೆ ದರದಲ್ಲಿ ಔಷಧಿ ನೀಡುವುದೂ ಒಂದು ದಾನವೇ ಆಗಿದೆ. ಇಲ್ಲಿ ನೀಡುವ ಔಷಧಿಗಳು ಜನರಿಗೆ ಉಪಯೋಗವಾಗಲಿ. ಔಷಧಿಗಳು ಅಸಲಿ ಗುಣಮಟ್ಟದ್ದಾಗಿದ್ದು, ಅವಧಿ ಮೀರದಂತಿರಲಿ,” ಎಂದು ಹಾರೈಸಿದರು. 


ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, “ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಔಷಧ ಅಂಗಡಿಯ ಅವಶ್ಯಕತೆ ಬಹಳ ದಿನಗಳಿಂದ ಇತ್ತು. ಇದು ಪ್ರವಾಸಿಗರ ಕೇಂದ್ರಬಿಂದು ಆಗಿದ್ದು, ಸಾವಿರಾರು ಜನರು ನಿತ್ಯ ಇಲ್ಲಿ ಆಗಮಿಸುತ್ತಾರೆ. ಶ್ರೀಕೃಷ್ಣ ಮಠದ ಪ್ರದೇಶದಲ್ಲಿ ತಂಗುವ ಪ್ರವಾಸಿಗರು ಹೆಚ್ಚಿನವರು ಮಧ್ಯಮ ವರ್ಗದ ಜನರಾಗಿದ್ದಾರೆ. ಅವರಿಗೆ ಕಡಿಮೆ ದರದಲ್ಲಿ ಔಷಧ ಸಿಗುವ ಅಗತ್ಯವಿತ್ತು. ಇದೀಗ ಆ ಅವಶ್ಯಕತೆ ಈಡೇರಿದ್ದು , ಈ ಸೇವೆ ಜನರಿಗೆ ಶುಭಕರವಾಗಲಿ,”  ಎಂದು ಹೇಳಿದರು.

ಜನ್ ಮನ್ ಜನರಿಕ್ ಔಷಧಿ ಸಂಸ್ಥೆಯ ಸಿಇಒ ಡಾ. ಅನಿಲ ದೀಪಕ್ ಶೆಟ್ಟಿ ಮಾತನಾಡಿ, “ಭಾರತದಾದ್ಯಂತ ಜನರಿಗೆ ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿ ದೊರಕಬೇಕೆಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಜನರಿಕ್ ಹಾಗೂ ಬ್ರಾಂಡೆಡ್ ಔಷಧಿಗಳ ಬಗ್ಗೆ ಜನರಲ್ಲಿ ಹಲವಾರು ಅನುಮಾನಗಳಿವೆ. ಜನರಿಕ್ ಔಷಧಿಗಳು ಪರಿಣಾಮಕಾರಿಯೇ ಎಂಬ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಅನುಭವಿ ತಂಡವನ್ನು ರಚಿಸಿದ್ದೇವೆ,” ಎಂದು ತಿಳಿಸಿದರು.



ಈ ವೇಳೆ ಉಡುಪಿ ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ಶ್ರೀ ಪಲಿಮಾರು ಮಠದ ಅಡ್ಮಿನಿಸ್ಟ್ರೇಟರ್ ಪ್ರಹ್ಲಾದ್ ಪಿ.ಆರ್,  ಜನ್ ಮನ್ ಜನರಿಕ್ ಔಷಧಿ ಸಂಸ್ಥೆಯ  ಡೈರೆಕ್ಟರ್ ದೇವಿಪ್ರಸಾದ್ ಶೆಟ್ಟಿ, ಮಾರ್ಕೆಟಿಂಗ್ ಮ್ಯಾನೇಜರ್ ರಾಘವೇಂದ್ರ ರಾವ್, ಮೆಡಿಕಲ್ ಮಾಲಕ ವೆಂಕಟರಾಜ್ ಕಾರಂತ್ ದಂಪತಿ, ಮಗ ಮೆಡಿಕಲ್ ಫಾರ್ಮಾಸಿಸ್ಟ್ ನಿಶಾಂತ್ ಕಾರಂತ್ ಉಪಸ್ಥಿತರಿದ್ದರು. 



Ads on article

Advertise in articles 1

advertising articles 2

Advertise under the article