ಹೃದಯ ಸ್ತಂಭನಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯರು
ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ತುರ್ತು ಚಿಕಿತ್ಸೆ ಹಾಗೂ ಎಕ್ಮೋ (ECMO) ತಂತ್ರಜ್ಞಾನದ ನೆರವಿನಿಂದ ಯಶಸ್ವಿಯಾಗಿ ಗುಣಮುಖರನ್ನಾಗಿ ಮಾಡಿದ್ದಾರೆ.
ವ್ಯಕ್ತಿ ತಮ್ಮ ನಿವಾಸದಲ್ಲಿ ಕುಸಿದು ಬಿದ್ದಾಗ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಅದೇ ಪ್ರದೇಶದಲ್ಲಿದ್ದರು. ಕೂಡಲೇ ಅವರು ಸಿಪಿಆರ್ (ಕಾರ್ಡಿಯೋಪಲ್ಮನರಿ ರಿಸಸ್ಸಿಟೇಶನ್) ಆರಂಭಿಸಿ, ಸ್ಥಳದಲ್ಲೇ ಇಂಟ್ಯುಬೇಷನ್ ನಡೆಸಿದರು. ಬಳಿಕ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿಯೂ ನಿರಂತರವಾಗಿ ಸಿಪಿಆರ್ ಮುಂದುವರಿಸಲಾಯಿತು. ಹಲವು ಬಾರಿ ಡಿಫಿಬ್ರಿಲೇಟರ್ ಶಾಕ್ ನೀಡಿದ ನಂತರ ಸುಮಾರು ಒಂದು ಗಂಟೆಯ ಬಳಿಕ ರಕ್ತ ಪರಿಚಲನೆ ಮರುಸ್ಥಾಪನೆಯಾಯಿತು.
ಆದರೆ, ಎರಡೂ ಶ್ವಾಸಕೋಶಗಳು ಪಲ್ಮನರಿ ಎಡಿಮಾದಿಂದ ತೀವ್ರವಾಗಿ ಬಾಧಿತವಾಗಿದ್ದರಿಂದ ಹಾಗೂ ಹೃದಯವು ಸ್ವತಃ ರಕ್ತ ಪರಿಚಲನೆ ನಡೆಸಲು ಅಸಮರ್ಥವಾಗಿದ್ದ ಹಿನ್ನೆಲೆಯಲ್ಲಿ, ಹೃದಯ ಮತ್ತು ಎದೆಗೂಡು ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರು ಕೇವಲ 30 ನಿಮಿಷಗಳೊಳಗೆ ವೀನೋ-ಆರ್ಟೀರಿಯಲ್ ಎಕ್ಮೋ (VA-ECMO) ವ್ಯವಸ್ಥೆಯನ್ನು ಅಳವಡಿಸಿದರು. ಸುಮಾರು 36 ಗಂಟೆಗಳ ಬಳಿಕ ರೋಗಿಯನ್ನು ಎಕ್ಮೋದಿಂದ ಹೊರತೆಗೆದು ಎಕ್ಸ್‌ಟ್ಯುಬೇಷನ್ ಮಾಡಲಾಯಿತು. ಪರೀಕ್ಷೆಯಲ್ಲಿ ಯಾವುದೇ ನರಗಳಿಗೆ ಹಾನಿಯಾಗಿಲ್ಲ ಎಂಬುದು ದೃಢಪಟ್ಟಿದ್ದು, ಬಳಿಕ ಇಂಪ್ಲಾಂಟಬಲ್ ಕಾರ್ಡಿಯೋವರ್ಟರ್ ಡಿಫಿಬ್ರಿಲೇಟರ್ (ICD) ಅಳವಡಿಕೆಗಾಗಿ ಹೃದ್ರೋಗ ವಿಭಾಗಕ್ಕೆ ವರ್ಗಾಯಿಸಲಾಯಿತು.
ಹೃದಯ ಮತ್ತು ಎದೆಗೂಡು ಶಸ್ತ್ರಚಿಕಿತ್ಸಾ ವಿಭಾಗದ ಕನ್ಸಲ್ಟೆಂಟ್ ಡಾ. ಶ್ಯಾಮ್ ಕೆ. ಅಶೋಕ್ ಮಾತನಾಡಿ, “ಹೃದಯ ಸ್ತಂಭನದಂತಹ ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯ. ಕುಸಿದ ತಕ್ಷಣವೇ ಆರಂಭಿಸಿದ ಸಿಪಿಆರ್ ಮತ್ತು ತ್ವರಿತವಾಗಿ ಎಕ್ಮೋ ಅಳವಡಿಕೆ ಸಾಧ್ಯವಾದ ಕಾರಣವೇ ರೋಗಿ ಯಾವುದೇ ಮಿದುಳಿನ ಹಾನಿಯಿಲ್ಲದೆ ಚೇತರಿಸಿಕೊಳ್ಳಲು ನೆರವಾಯಿತು,” ಎಂದು ಹೇಳಿದರು.
ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ, “ಜೀವ ಉಳಿಸುವಲ್ಲಿ ವೈದ್ಯಕೀಯ ತಂಡದ ಸಮನ್ವಯ ಅತ್ಯಂತ ಮುಖ್ಯ. ಸಾರ್ವಜನಿಕರು ಕನಿಷ್ಠ ಸಿಪಿಆರ್ ಕಲಿಯುವುದು ಅಗತ್ಯ. ತುರ್ತು ಸಂದರ್ಭಗಳಲ್ಲಿ ಸಾಮಾನ್ಯ ನಾಗರಿಕರೂ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು,” ಎಂದು ತಿಳಿಸಿದರು.
ಈ ಚಿಕಿತ್ಸೆಯನ್ನು ಸಿಟಿವಿಎಸ್ ವಿಭಾಗದ ಡಾ. ಶ್ಯಾಮ್ ಕೆ. ಅಶೋಕ್, ಡಾ. ವಿಜಯ್ ಕುಮಾರ್, ಡಾ. ಸಾಯಿ, ಡಾ. ಗಣೇಶ್ ಕಾಮತ್, ಡಾ. ಶುಭಂ ಹಾಗೂ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಪರ್ಫ್ಯೂಷನಿಸ್ಟ್ ಶ್ರೀ ಹಲೀಶ್ ಅವರ ತಂಡ ಯಶಸ್ವಿಯಾಗಿ ನಿರ್ವಹಿಸಿತು.
ಭಾರತದಲ್ಲಿ ಆಸ್ಪತ್ರೆಯ ಹೊರಗೆ ಸಂಭವಿಸುವ ಹೃದಯ ಸ್ತಂಭನದ ಪ್ರಕರಣಗಳಲ್ಲಿ ಮರಣ ಪ್ರಮಾಣ ಶೇ.90ಕ್ಕೂ ಅಧಿಕವಾಗಿದೆ. ಸಾರ್ವಜನಿಕರಲ್ಲಿ ಸಿಪಿಆರ್ ಬಗ್ಗೆ ಅರಿವು ಮತ್ತು ತರಬೇತಿ ಹೆಚ್ಚಿದರೆ ಅನೇಕ ಜೀವಗಳನ್ನು ಉಳಿಸಬಹುದೆಂದು ಆಸ್ಪತ್ರೆ ತಿಳಿಸಿದೆ.