-->
ಪರವಾನಿಗೆ ಇಲ್ಲದೆ ಜಲಕ್ರೀಡೆ ನಡೆಸಿದರೆ ಕಾನೂನು ಕ್ರಮ: ಕರಾವಳಿ ಕಾವಲು ಪೊಲೀಸ್ ಇಲಾಖೆ ಎಚ್ಚರಿಕೆ

ಪರವಾನಿಗೆ ಇಲ್ಲದೆ ಜಲಕ್ರೀಡೆ ನಡೆಸಿದರೆ ಕಾನೂನು ಕ್ರಮ: ಕರಾವಳಿ ಕಾವಲು ಪೊಲೀಸ್ ಇಲಾಖೆ ಎಚ್ಚರಿಕೆ


ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಲಕ್ರೀಡೆ ಮತ್ತು ಬೋಟಿಂಗ್ ನಡೆಸುವ ಎಲ್ಲಾ ಬೋಟ್ ಮಾಲೀಕರು ಅಗತ್ಯ ಪರವಾನಿಗೆಗಳನ್ನು ಪಡೆದುಕೊಂಡು ಮಾತ್ರ ಸೇವೆ ನಡೆಸಬೇಕು ಎಂದು ಕರಾವಳಿ ಕಾವಲು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.


ಈ ಬಗ್ಗೆ ಉಡುಪಿ ಜಿಲ್ಲೆಯ 9 ಕರಾವಳಿ ಕಾವಲು ಪೊಲೀಸ್ ಠಾಣೆಗಳಲ್ಲಿ ಬೋಟ್ ಮಾಲೀಕರು ಹಾಗೂ ಚಾಲಕರ ಸಭೆಗಳನ್ನು ನಡೆಸಿ ಸುರಕ್ಷತಾ ನಿಯಮಗಳು, ಕಾನೂನುಬದ್ಧ ಪರವಾನಿಗೆ ಹಾಗೂ ಜಲಕ್ರೀಡೆ ನಡೆಸುವ ಮಾರ್ಗಸೂಚಿಗಳ ಕುರಿತು ವಿವರವಾಗಿ ತಿಳುವಳಿಕೆ ನೀಡಲಾಯಿತು. 

ಕರಾವಳಿ ಕಾವಲು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜಲಕ್ರೀಡೆ ನಡೆಸಲು ವಿವಿಧ ಇಲಾಖೆಗಳ ಅನುಮತಿ ಹಾಗೂ ಪರವಾನಿಗೆ ಕಡ್ಡಾಯವಾಗಿದೆ. ಈ ಹಿಂದೆ ಒಟ್ಟು 227 ಜಲಕ್ರೀಡೆ ಬೋಟ್ ಮಾಲೀಕರಲ್ಲಿ ಕೇವಲ 42 ಮಂದಿ ಮಾತ್ರ ಪರವಾನಿಗೆ ಹೊಂದಿದ್ದರು. ಉಳಿದ 185 ಮಂದಿ ಪರವಾನಿಗೆ ಪಡೆಯಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ 09 ಕರಾವಳಿ ಕಾವಲು ಪೊಲೀಸ್ ಠಾಣೆಗಳಲ್ಲಿ ಬೋಟ್ ಮಾಲೀಕರು ಹಾಗೂ ಚಾಲಕರ ಸಭೆಗಳನ್ನು ನಡೆಸಿ ಸುರಕ್ಷತಾ ನಿಯಮಗಳು, ಕಾನೂನುಬದ್ಧ ಪರವಾನಿಗೆ ಹಾಗೂ ಜಲಕ್ರೀಡೆ ನಡೆಸುವ ಮಾರ್ಗಸೂಚಿಗಳ ಕುರಿತು ವಿವರವಾಗಿ ತಿಳುವಳಿಕೆ ನೀಡಲಾಯಿತು. ಇದರ ಫಲವಾಗಿ ಪ್ರಸ್ತುತ 227 ಬೋಟ್ ಮಾಲೀಕರಲ್ಲಿ 151 ಮಂದಿ ಪರವಾನಿಗೆ ಪಡೆದುಕೊಂಡಿದ್ದು, 76 ಮಂದಿ ತಮ್ಮ ಪರವಾನಿಗೆಯನ್ನು ನವೀಕರಿಸಬೇಕಿದೆ.

ಪರವಾನಿಗೆ ನವೀಕರಣಕ್ಕೆ ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದರೂ, ಇದುವರೆಗೆ ಸಂಬಂಧಪಟ್ಟ ಬೋಟ್ ಮಾಲೀಕರು ನವೀಕರಣ ಮಾಡಿರುವ ಕುರಿತು ಯಾವುದೇ ಮಾಹಿತಿ ಸಲ್ಲಿಸಿಲ್ಲ.ಆದ್ದರಿಂದ ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಲಕ್ರೀಡೆ ಹಾಗೂ ಬೋಟಿಂಗ್ ನಡೆಸುವ ಎಲ್ಲಾ ಬೋಟ್ ಮಾಲೀಕರು ನಿಗದಿತ ಅವಧಿಯೊಳಗೆ ಅಗತ್ಯ ಪರವಾನಿಗೆ ಹಾಗೂ ಅದರ ನವೀಕರಣವನ್ನು ಪೂರ್ಣಗೊಳಿಸಿ, ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು ಮಾತ್ರ ಜಲಕ್ರೀಡೆ ನಡೆಸಬೇಕು ಎಂದು ಸೂಚಿಸಲಾಗಿದೆ.

ನಿಗದಿತ ಅವಧಿಯೊಳಗೆ ಪರವಾನಿಗೆ ಪಡೆಯದಿದ್ದಲ್ಲಿ ಅಥವಾ ನವೀಕರಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಸಂಭವಿಸುವ ಯಾವುದೇ ಅನಾಹುತಗಳಿಗೆ ಸಂಬಂಧಪಟ್ಟ ಬೋಟ್ ಮಾಲೀಕರನ್ನೇ ಹೊಣೆಗಾರರನ್ನಾಗಿ ಪರಿಗಣಿಸಿ, ಅವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕರಾವಳಿ ಕಾವಲು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

Ads on article

Advertise in articles 1

advertising articles 2

Advertise under the article