-->
ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದ ಕಾಂಗ್ರೆಸ್: ರೇಷ್ಮಾ ಉದಯ ಶೆಟ್ಟಿ ಆಕ್ರೋಶ

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದ ಕಾಂಗ್ರೆಸ್: ರೇಷ್ಮಾ ಉದಯ ಶೆಟ್ಟಿ ಆಕ್ರೋಶ


ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ನೀಡಲು ವಿಫಲವಾಗಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಮಹಿಳಾ ನ್ಯಾಯ ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವ ಕಾಂಗ್ರೆಸ್ ಪಕ್ಷವು, ಅಧಿಕಾರ ಹಂಚಿಕೆಯ ಪ್ರಶ್ನೆ ಬಂದಾಗ ತನ್ನ ನಿಜವಾದ ಮುಖವನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಅರ್ಹ ಮಹಿಳಾ ನಾಯಕರನ್ನು ಸಚಿವ ಸಂಪುಟದಿಂದ ದೂರವಿಡುವ ಮೂಲಕ ಮಹಿಳೆಯರನ್ನು ಕೇವಲ ಮತ ಬ್ಯಾಂಕ್ ಆಗಿ ಮಾತ್ರ ಕಾಣುವ ತನ್ನ ರಾಜಕೀಯ ಧೋರಣೆಯನ್ನು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಇದೇ ಕಾಂಗ್ರೆಸ್ ಪಕ್ಷವು 2026ರಲ್ಲಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಜಾರಿಯನ್ನು ವೇಗಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಂಡಿಸಿದ್ದ ಸಂವಿಧಾನ (131ನೇ ತಿದ್ದುಪಡಿ) ಮಸೂದೆಗೆ ವಿರೋಧ ವ್ಯಕ್ತಪಡಿಸಿತ್ತು. ಮಹಿಳಾ ಸಬಲೀಕರಣದ ಕುರಿತು ಕಾಂಗ್ರೆಸ್‌ನ ಮಾತು ಮತ್ತು ನಡೆ ನಡುವೆ ಇರುವ ವ್ಯತ್ಯಾಸವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಮಹಿಳಾ ಸಬಲೀಕರಣ ಎಂದರೆ ಕೇವಲ ಉಚಿತ ಯೋಜನೆಗಳನ್ನು, ಗ್ಯಾರೆಂಟಿಗಳನ್ನು ಘೋಷಿಸುವುದು ಅಥವಾ ಚುನಾವಣಾ ಭರವಸೆಗಳನ್ನು ನೀಡುವುದಲ್ಲ. ಮಹಿಳೆಯರಿಗೆ ಆಡಳಿತದ ಅತ್ಯುನ್ನತ ಹಂತಗಳಲ್ಲಿ ನಿರ್ಧಾರ ಕೈಗೊಳ್ಳುವ ಅವಕಾಶ, ಸಮಾನ ಪಾಲುದಾರಿಕೆ ಮತ್ತು ಗೌರವಯುತ ಸ್ಥಾನಮಾನವನ್ನು ಕಲ್ಪಿಸುವ ದೃಢ ಸಂಕಲ್ಪವೇ ನಿಜವಾದ ಮಹಿಳಾ ಸಬಲೀಕರಣ. ಭಾರತೀಯ ಸಂಸ್ಕೃತಿಯು ಮಹಿಳೆಯನ್ನು ಶಕ್ತಿ, ಜ್ಞಾನ ಮತ್ತು ಮಾತೃತ್ವದ ಪ್ರತೀಕವಾಗಿ ಪೂಜಿಸುವ ಪರಂಪರೆಯನ್ನು ಹೊಂದಿದೆ. ಆದ್ದರಿಂದ ಮಹಿಳೆಯರಿಗೆ ಅಧಿಕಾರದಲ್ಲಿ ನ್ಯಾಯಯುತ ಪಾಲು ನೀಡುವುದು ನಮ್ಮ ಸಾಂಸ್ಕೃತಿಕ ಮೌಲ್ಯಗಳ ಪ್ರತಿಬಿಂಬವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣವನ್ನು ಕೇವಲ ಘೋಷಣೆಗಳು ಮತ್ತು ಉಚಿತ ಯೋಜನೆಗಳಿಗೆ ಸೀಮಿತಗೊಳಿಸಿದ್ದು, ಅಧಿಕಾರ ಹಂಚಿಕೆಯಲ್ಲಿ ಮಹಿಳೆಯರನ್ನು ನಿರ್ಲಕ್ಷಿಸುವ ಮೂಲಕ ತನ್ನ ದ್ವಂದ್ವ ನೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.

ಈ ಸಚಿವ ಸಂಪುಟದ ರಚನೆಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವತಂತ್ರ ನಿರ್ಧಾರ ಸಾಮರ್ಥ್ಯದ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿಗೆ ರಾಜ್ಯದ ಹಿತಾಸಕ್ತಿಗಿಂತ ದೆಹಲಿಯ ಕಾಂಗ್ರೆಸ್ ಹೈಕಮಾಂಡ್‌ನ ಕೈಗೊಂಬೆ ನಿರ್ದೇಶನಗಳಿಗೆ ಆದ್ಯತೆ ಕೊಡುವುದೇ ಮೊದಲ ಕರ್ತವ್ಯ ಎಂಬಂತೆ ವರ್ತಿಸುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಕರ್ನಾಟಕದಂತಹ ದೊಡ್ಡ ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಂತಹ ಮಹತ್ವದ ನಿರ್ಧಾರಗಳೂ ರಾಜ್ಯದ ನಾಯಕತ್ವದ ವಿವೇಚನೆಯ ಬದಲು ಹೈಕಮಾಂಡ್‌ನ ಇಚ್ಛೆಗೆ ಅನುಗುಣವಾಗಿ ನಡೆಯುತ್ತಿರುವುದು ಪ್ರಜಾಪ್ರಭುತ್ವದ ವಿರುದ್ಧವಾಗಿದೆ.

ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಅಧಿಕಾರದಲ್ಲಿ ನ್ಯಾಯಯುತ ಪಾಲು ನೀಡಲು ಏಕೆ ಹಿಂಜರಿಯುತ್ತಿದೆ ಎಂಬುದನ್ನು ರಾಜ್ಯದ ಮಹಿಳೆಯರಿಗೆ ಸ್ಪಷ್ಟಪಡಿಸಬೇಕು. ಇನ್ನೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಸಿಗಬಹುದು ಎನ್ನುವ ಆಸೆಯಲ್ಲಿ ಮುಂದುವರಿಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತೆಯರ ಬಗ್ಗೆ ಅನುಕಂಪವಿದೆ. ಭಾರತೀಯ ಜನತಾ ಪಾರ್ಟಿಯ ಸಿದ್ದಾಂತಗಳಿಗೆ ಬೆಲೆ ಕೊಟ್ಟು ನಮ್ಮ ಪಕ್ಷಕ್ಕೆ ಬರಲು ಬಯಸುವ ಕಾಂಗ್ರೆಸ್ ಕಾರ್ಯಕರ್ತ ಮಹಿಳೆಯರಿಗೆ ಸ್ವಾಗತ.

ಭಾರತೀಯ ಜನತಾ ಪಾರ್ಟಿಯು ಮಹಿಳೆಯರಿಗೆ ಕೇವಲ ಚುನಾವಣಾ ಪ್ರಣಾಳಿಕೆಗಳಲ್ಲಿ ಸ್ಥಾನವಲ್ಲ, ಆಡಳಿತದ ನಿರ್ಧಾರ ಕೈಗೊಳ್ಳುವ ವೇದಿಕೆಗಳಲ್ಲಿ ಗೌರವಯುತ ಮತ್ತು ಪರಿಣಾಮಕಾರಿ ಪಾತ್ರ ದೊರೆಯಬೇಕು ಎಂದು ದೃಢವಾಗಿ ನಂಬುತ್ತದೆ. ಕಾಂಗ್ರೆಸ್ ಸರ್ಕಾರವು ತನ್ನ ತಪ್ಪನ್ನು ಕೂಡಲೇ ಸರಿಪಡಿಸಿ, ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ನ್ಯಾಯಯುತ ಹಾಗೂ ಅರ್ಥಪೂರ್ಣ ಪ್ರಾತಿನಿಧ್ಯ ನೀಡಬೇಕು.

ಕರ್ನಾಟಕದ ಮಹಿಳೆಯರು ಈ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವ ಸರ್ಕಾರವನ್ನು ಅವರು ಗುರುತಿಸುತ್ತಾರೆ; ಮಹಿಳೆಯರನ್ನು ಕಡೆಗಣಿಸುವ ಸರ್ಕಾರಕ್ಕೂ ಪ್ರಜಾಪ್ರಭುತ್ವದ ಮೂಲಕ ತಕ್ಕ ಉತ್ತರ ನೀಡುತ್ತಾರೆ ಎಂದು ರೇಷ್ಮಾ ಉದಯ್ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article