
Mangalore: ಮಾದಕ ವಸ್ತುಗಳ ಸಾಗಾಟ ಪ್ರಕರಣ; 7 ಮಂದಿ ಆರೋಪಿಗಳ ಬಂಧನ
ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಮುಕ್ತ ಮಂಗಳೂರು ಅಭಿಯಾನದಡಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಅವರು ಹೇಳಿಕೆ ನೀಡಿದ್ದು, ಕುದ್ರೋಳಿ ಖಂಡತ್‌ಪಳ್ಳಿ ಪರಿಸರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಲಾಗಿದೆ. ಆರೋಪಿ ಅಬ್ದುಲ್ ಸಮದ್ ಯಾನೆ ಚಮ್ಮು ಎಂಬಾತನನ್ನು ದಸ್ತಗಿರಿ ಮಾಡಿ ಆತನಿಂದ 1.40 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಲಿಂಗಪ್ಪಯ್ಯ ಕಾಡು ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮರವೂರು ಎಂಬಲ್ಲಿ ದಾಳಿ ನಡೆಸಿ ಬಿಹಾರ ಮೂಲದ ದೋಲತ್ ಕುಮಾರ್ ಶರ್ಮಾ, ಮಹಮ್ಮದ್ ಖುಷಲಂ ಎಂಬವರನ್ನು ಬಂಧಿಸಿ ಅವರ ಬಳಿಯಿದ್ದ ಸುಮಾರು 1.189 ಕೆ.ಜಿ ಗಾಂಜಾ ಹಾಗೂ 219 ಗ್ರಾಂ ಬಾಂಗ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಕಾರ್ತಿಕ್ ಮತ್ತು ಮೋಹಿತ್ ಎಂಬವರನ್ನು ಬಂಧಿಸಿ 800 ಗ್ರಾಂ ಗಾಂಜಾವನ್ನು ಪಡಿಸಿಕೊಳ್ಳಲಾಗಿದೆ. ಮಂಗಳೂರು ಇಂಜಿನಿಯರಿAಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೇರಳ ಮೂಲದ ಪ್ರಣವ್ ಕೆ.ವಿ ಎಂಬಾತನು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತ ಪಡೆದು ಬಂಧಿಸಲಾಗಿದೆ. ಈತನಿಂದ 1.100 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.