
New Delhi: ಕೊಲೆ ಪ್ರಕರಣ; ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು
13/08/2025
ದಿಲ್ಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ನೇತೃತ್ವದ ಸುಪ್ರೀಂ ಕೋರ್ಟ್, ಮಾರ್ಚ್ ೪ರಂದು ಕುಸ್ತಿಪಟು ಸುಶೀಲ್ ಕುಮಾರ್ ಅವರಿಗೆ ಜಾಮೀನು ನೀಡಿದ್ದ ದಿಲ್ಲಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ. ಒಂದು ವಾರದೊಳಗೆ ಶರಣಾಗುವಂತೆ ಸುಶೀಲ್ ಕುಮಾರ್‌ಗೆ ಸೂಚಿಸಲಾಗಿದೆ.
ಸುಶೀಲ್ ಕುಮಾರ್ ಮತ್ತು ಇತರರು ಮೇ ೨೦೨೧ರಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಧಂಕರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಧಂಕರ್ ಅವರ ಮೆದುಳಿಗೆ ತೀವ್ರವಾದ ಏಟು ಬಿದ್ದ ಕಾರಣ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿತ್ತು.